ಪಿಲಿಭಿತ್ (ಉತ್ತರಪ್ರದೇಶ): ಗಡಿಯಲ್ಲಿ ನೇಪಾಳ ಪೊಲೀಸರು ನಡೆಸಿದ ಗುಂಡಿನ ದಾಳಿ ವೇಳೆ ಗಾಯಗೊಂಡಿದ್ದ ಭಾರತದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿರುವುದಾಗಿ ಉತ್ತರ ಪ್ರದೇಶ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಗೋವಿಂದ (26) ಎಂದು ಗುರುತಿಸಲಾಗಿದೆ. ಅವರು, ಪಪ್ಪು ಸಿಂಗ್ ಮತ್ತು ಗುರ್ಮೀತ್ ಸಿಂಗ್ ಎನ್ನುವವರೊಂದಿಗೆ ನೇಪಾಳಕ್ಕೆ ಪ್ರವೇಶಿಸಿದ್ದರು. ಮೂವರನ್ನು ನೇಪಾಳ ಪೊಲೀಸರು ತಡೆದಿದ್ದರು. ಈ ವೇಳೆ ವಾಗ್ವಾದ ನಡೆದಿದ್ದು, ಗೋವಿಂದ ಅವರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಪ್ರಕರಣ ಕುರಿತು ಮಾತನಾಡಿರುವ ಪಿಲಿಭಿತ್‌ನ ಪೊಲೀಸ್ ಸೂಪರಿಂಟೆಂಡೆಂಟ್ ಜೈ ಪ್ರಕಾಶ್ ಅವರು, ʼಭಾರತದ ಮೂವರು ನೇಪಾಳ ಗಡಿ ಪ್ರವೇಶಿಸಿದ್ದಾರೆ ಹಾಗೂ ಅಲ್ಲಿನ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ ಎಂಬ ವಿಚಾರ ತಿಳಿಯಿತು. ಈ ವೇಳೆ ಗುಂಡಿನ ದಾಳಿ ನಡೆದಿದ್ದು, ಗಾಯಗೊಂಡಿದ್ದ ವ್ಯಕ್ತಿಯು ಆಸ್ಪತ್ರೆಗೆ ಸೇರಿಸುವ ವೇಳೆ ಮೃತಪಟ್ಟಿದ್ದಾನೆ. ಮತ್ತೊಬ್ಬ ಭಾರತದ ಗಡಿಯತ್ತ ಧಾವಿಸಿ ಜೀವ ಉಳಿಸಿಕೊಂಡಿದ್ದಾನೆ. ಆದರೆ, ಮತ್ತೊಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾನೆʼ ಎಂದು ತಿಳಿಸಿದ್ದಾರೆ.
ಘಟನೆ ಬಳಿಕ ಈ ಪ್ರದೇಶದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ.