ನವದೆಹಲಿ: ಪಂಚ ರಾಜ್ಯಗಳ ಚುನಾವಣೆಯ ಹೊಸ್ತಿಲಲ್ಲಿ ಮತಯಂತ್ರಗಳಿಗೆ ಸಂಬಂಧಿಸಿದ ಸುಳ್ಳು, ನಕಲಿ ಸುದ್ದಿಗಳ ಹಾವಳಿ ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅಂತಹ ನಕಲಿ, ಸುಳ್ಳು ಸುದ್ದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿಎಸ್ ಕೃಷ್ಣ ಮೂರ್ತಿ ಅವರು ಮತಯಂತ್ರಗಳ ಹ್ಯಾಕಿಂಗ್ ಬಗ್ಗೆ ಹೇಳಿಕೆ ನೀಡಿದ್ದರು, ಅದರಲ್ಲಿ ಮತಯಂತ್ರಗಳನ್ನು ಹ್ಯಾಕ್ ಮಾಡುವ ಮೂಲಕ ನಿರ್ದಿಷ್ಟ ಪಕ್ಷವೊಂದು ವಿಧಾನಸಭಾ ಚುನಾವಣೆ ಗೆದ್ದಿದೆ ಎಂದು ಅಭಿಪ್ರಾಯಪಟ್ಟಿದ್ದರೆಂದು ಡಿ.21, 2017 ರ ದಿನಾಂಕವಿದ್ದ ನಕಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿತ್ತು.
ಇದನ್ನು ಗಮನಿಸಿರುವ ಚುನಾವಣಾ ಆಯೋಗ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ. ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರವಾಗಿ ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿ ಐಪಿಸಿ ಸೆಕ್ಷನ್ 500,ಅಡಿಯಲ್ಲಿ ಹಾಗೂ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 128, 134 ಅಡಿಯಲ್ಲಿ ಎಫ್ಐಆರ್ ನ್ನು ದಾಖಲಿಸಿದೆ.
ಯಾರ ಹೆಸರಿನಲ್ಲಿ ಸುಳ್ಳು ಸುದ್ದಿ ಹರಡುತ್ತಿತ್ತೋ ಆ ಮಾಜಿ ಚುನಾವಣಾ ಆಯುಕ್ತರೇ ಸ್ವತಃ ಇದು ನಕಲಿ, ಸುಳ್ಳು ಸುದ್ದಿ ಎಂಬ ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಿಕೆ ಸಮೇತ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಸುಳ್ಳು, ನಕಲಿ ಸುದ್ದಿಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಹಳೆಯ ಸುಳ್ಳು, ನಕಲಿ ಸುದ್ದಿಗಳನ್ನೇ ಈಗ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದೆ ಎಂದು ಆಯೋಗ ಹೇಳಿದೆ. ಮಾ.27 ರಿಂದ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪಾಂಡಿಚೆರಿಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.