ಕಾಸರಗೋಡು: ಚುನಾವಣೆ ವೆಚ್ಚ ನಿರೀಕ್ಷಕರಾದ ಎಂ. ಸತೀಶ್ ಕುಮಾರ್ ಮತ್ತು ಸಂಜಯ್ ಪೌಲ್ ಅವರು ವಿಧಾನಸಭೆ ಚುನಾವಣೆ ಸಂಬಂಧ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಮೀಡಿಯಾ ಸರ್ಟಿಫೀಕೇಷನ್ ಮಾನಿಟರಿಂಗ್ ಸಮಿತಿ(ಎಂ.ಸಿ.ಎಂ.ಸಿ) ಕೇಂದ್ರವನ್ನು ಶನಿವಾರ ಸಂದರ್ಶಿಸಿ, ಇಲ್ಲಿನ ಚಟುವಟಿಕೆಗಳ ಅವಲೋಕನ ನಡೆಸಿದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಜತೆಗಿದ್ದರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಸೈಮನ್ ಫೆರಾಂಡಿಸ್, ಖರ್ಚುವೆಚ್ಚ ನೋಡೆಲ್ ಅಧಿಕಾರಿ ಕೆ.ಸತೀಶನ್ ಮೊದಲಾದವರು ಉಪಸ್ಥಿತರಿದ್ದರು.
ಮುದ್ರಣ, ದೃಶ್ಯ, ಶ್ರವ್ಯ, ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಪೇಯ್ಡ್ ನ್ಯೂಸ್ ಗಳು ಪ್ರಕಟಗೊಳ್ಳುವುದನ್ನು ಈ ಕೇಂದ್ರ ಕಣ್ಗಾವಲು ಇರಿಸಲಿದೆ. ಎಂ.ಸಿ.ಎಂ.ಸಿ.ಯ ಮುಂಗಡ ಅನುಮತಿ ಪಡೆಯದೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತು ನಡೆಸುವಂತಿಲ್ಲ. ಅಭ್ಯರ್ಥಿಯ ವ್ಯಕ್ತಿಪರ ತೇಜೋವಧೆ ನಡೆಸುವ ರೀತಿಯ ಸುದ್ದಿಗಳು, ಜಾತಿ-ಮತಗಳ ನಿಂದನೆ ನಡೆಸುವ ವಾರ್ತೆಗಳು ಇತ್ಯಾದಿ ವಿರುದ್ಧ ಪ್ರಜಾಪ್ರಭುತ್ವ ನಿಯಮ ಪ್ರಕಾರ ಕ್ರಮ ಕೈಗೊಳ್ಳಲಾಗುವುದು.