ನವದೆಹಲಿ: ದೆಹಲಿಯಿಂದ ಪುಣೆಗೆ ಹೊರಡುತ್ತಿದ್ದ ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತಾನು ಕೋವಿಡ್ -19 ರೋಗಿಯೆಂದು ಹೇಳಿಕೊಂಡಿದ್ದು, ದೊಡ್ಡ ಅವಾಂತರವೇ ಸೃಷ್ಟಿಸಿದ ಘಟನೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
"ಮಾರ್ಚ್ 4 ರಂದು ಪ್ರಯಾಣಿಕರೊಬ್ಬರು ತಾನು ಪುಣೆಗೆ ಪ್ರಯಾಣಿಸುತ್ತಿದ್ದು, ತನಗೆ ಕೋವಿಡ್-19 ಪಾಸಿಟಿವ್ ಬಂದಿದೆ ಎಂದು ವಿಮಾನದಲ್ಲಿದ್ದ ಸಿಬ್ಬಂದಿಗೆ ಮಾಹಿತಿ ನೀಡಿದರು" ಎಂದು ಇಂಡಿಗೊ ಅಧಿಕಾರಿಯೊಬ್ಬರು ಶುಕ್ರವಾರ ಎಎನ್‍ಐಗೆ ತಿಳಿಸಿದ್ದಾರೆ.
ಪ್ರಯಾಣಿಕ ತಾನು ಕೊರೋನಾ ಸೋಂಕಿತ ಎಂದು ಹೇಳಿಕೊಂಡ ನಂತರ ವಿಮಾನದಲ್ಲಿದ್ದ ಇತರೆ ಪ್ರಯಾಣಿಕರು ತೀವ್ರ ಆತಂಕಗೊಂಡಿದ್ದರು. ಹೀಗಾಗಿ ರನ್ ವೇ ನಲ್ಲಿದ್ದ ವಿಮಾನವನ್ನು ಪೈಲಟ್ ಮರಳಿ ಟ್ಯಾಕ್ಸಿ-ಬೇಗೆ ತಂದು ನಿಲ್ಲಿಸಿದರು. ಬಳಿಕ ಕೊರೋನಾ ಸೋಂಕಿತ ವ್ಯಕ್ತಿ ಸೇರಿದಂತೆ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕಳೆಗಿಳಿಸಲಾಯಿತು.
ನಂತರ, ವಿಮಾನವನ್ನು ಸಂಪೂರ್ಣ ಸಾನಿಟೈನ್ ಮಾಡಿ, ಸೀಟ್ ಕವರ್ಗಳನ್ನು ಸಹ ಬದಲಾಯಿಸಲಾಯಿತು. ಸೋಂಕಿತ ವ್ಯಕ್ತಿಯನ್ನು ವಿಮಾನ ನಿಲ್ದಾಣದ ವೈದ್ಯಕೀಯ ಅಧಿಕಾರಿಗಳಿಗೆ ಒಪ್ಪಿಸಿ, ಸುಮಾರು ಎರಡು ಗಂಟೆ ತಡವಾಗಿ ವಿಮಾನ ಟೇಕ್ ಆಫ್ ಆಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.