ಗಾಜಿಯಾಬಾದ್:ಉತ್ತರ ಪ್ರದೇಶದ ಗಾಜಿಯಾಬಾದ್ ರೈಲು ನಿಲ್ದಾಣದಲ್ಲಿ ಶನಿವಾರ ಶತಾಬ್ದಿ ಎಕ್ಸ್ ಪ್ರೆಸ್ ನ ಜನರೇಟರ್ ಮತ್ತು ಲಗ್ಗೇಜ್ ಬೋಗಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಳಗ್ಗೆ 6-45ರ ಸುಮಾರಿನಲ್ಲಿ ಈ ಘಟನೆ ನಡೆದಿದೆ. ನವದೆಹಲಿ- ಲಖನೌ ಶತಾಬ್ದಿ ಎಕ್ಸ್ ಪ್ರೆಸ್ ಬೆಳಗ್ಗೆ 6-41ರ ಹೊತ್ತಿಗೆ ಗಾಜಿಯಾಬಾದ್ ನಿಲ್ದಾಣಕ್ಕೆ ಬಂದಾಗ ಜನರೇಟರ್ ಮತ್ತು ಲಗ್ಗೇಜ್ ಬೋಗಿಯೊಂದರಲ್ಲಿ ಹೊಗೆ ಕಾಣಿಸಿಕೊಂಡಿದೆ. ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಸಿ ಹೊಗೆಯನ್ನು ನಿಯಂತ್ರಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಕಿ ಹೊತ್ತಿಕೊಂಡಿರುವ ಬೋಗಿಯನ್ನು ಬೇರ್ಪಡಿಸಿದ ಬಳಿಕ 8-20ರ ಸುಮಾರಿಗೆ ರೈಲು ತನ್ನ ಗಮ್ಯಸ್ಥಾನಕ್ಕೆ ಪ್ರಯಾಣವನ್ನು ಬೆಳೆಸಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಬೆಂಕಿ ಅವಘಡದಿಂದ ಯಾವುದೇ ಹಾನಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ದೆಹಲಿಯಿಂದ ಡೆಹ್ರಾಡೂನ್ ಗೆ ಸಂಪರ್ಕ ಕಲ್ಪಿಸುವ ಶತಾಬ್ದಿ ಎಕ್ಸ್ ಪ್ರೆಸ್ ರೈಲು ಉತ್ತರಾಖಂಡದ ಕಾನ್ಸ್ರೋ ಪ್ರದೇಶದಿಂದ ಸಂಚರಿಸುತ್ತಿದ್ದ ವೇಳೆ ಬೋಗಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿತ್ತು.