ನವದೆಹಲಿ: ಕೋವಿಡ್-19 ಲಸಿಕೆ ಪಡೆಯಲು ಇದ್ದ ಸಮಯ ಮಿತಿಯನ್ನು ತೆಗೆದುಹಾಕಿರುವ ಕೇಂದ್ರ ಸರ್ಕಾರ ಜನರಿಗೆ ಅನುಕೂಲವಾಗಲು ದಿನದ ಯಾವ ಸಮಯದಲ್ಲಾದರೂ ಲಿಸಿಕೆ ಪಡೆಯಬಹುದು ಎಂದು ಹೇಳಿದೆ.
ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್, ಸಾರ್ವಜನಿಕರು ಇನ್ನು ಮುಂದೆ ತಮ್ಮ ಅನುಕೂಲದ ಸಮಯದಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದು. ಪ್ರಧಾನಿ ಮೋದಿಯವರು ಜನರ ಆರೋಗ್ಯ ಮತ್ತು ಸಮಯಕ್ಕೆ ಬೆಲೆ ನೀಡುತ್ತಾರೆ ಎಂದಿದ್ದಾರೆ.
ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಿಸಲು ಇದುವರೆಗೆ ಇದ್ದ ಸಮಯ ಮಿತಿಯನ್ನು ತೆಗೆದುಹಾಕಲಾಗಿದೆ. ದಿನದ 24 ಗಂಟೆಯಲ್ಲಿ ಯಾವಾಗ ಬೇಕಾದರೂ ಜನರು ಬಂದು ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಹರ್ಷವರ್ಧನ್ ಟ್ವೀಟ್ ಮಾಡಿದ್ದಾರೆ.
ಈ ಮಧ್ಯೆ ಇಂದು ದೇಶದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ಕ್ರಿಕೆಟಿಗ ಕಪಿಲ್ ದೇವ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಅವರ ಪತ್ನಿ, ಸಿಕ್ಕಿಂ ಗವರ್ನರ್ ಗಂಗಾ ಪ್ರಸಾದ್ ದಂಪತಿ ಸೇರಿದಂತೆ ಹಲವು ಪ್ರಮುಖರು ಲಸಿಕೆ ಹಾಕಿಸಿಕೊಂಡಿದ್ದಾರೆ.