ಸ್ಯಾನ್‌ಡಿಯಾಗೋ : ಜಗತ್ತಿನಾದ್ಯಂತ ಕೋವಿಡ್ ಲಸಿಕೆ ಕಾರ್ಯಕ್ರಮ ಬಿರುಸಿನಿಂದ ನಡೆಯುತ್ತಿದೆ. ಅಮೆರಿಕದ ಸ್ಯಾನ್ ಡಿಯಾಗೋದಲ್ಲಿ ಮನುಷ್ಯರ ಪೂರ್ವಜರಿಗೂ ಲಸಿಕೆಗಳನ್ನು ನೀಡಲಾಗಿದೆ. ಸ್ಯಾನ್ ಡಿಯಾಗೊದ ಮೃಗಾಲಯದಲ್ಲಿನ ನಾಲ್ಕು ಒರಾಂಗುಟಾನ್ ಮತ್ತು ಐದು ಬೊನೊಬೊಸ್‌ಗಳಿಗೆ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಕೋವಿಡ್-19 ವಿರುದ್ಧ ಮನುಷ್ಯೇತರ ಜೀವಿಗಳಿಗೆ ಲಸಿಕೆ ನೀಡಿರುವುದು ಜಗತ್ತಿನಲ್ಲಿಯೇ ಇದು ಮೊದಲ ಸಲವಾಗಿದೆ.
ವಿವಿಧ ಆರೋಗ್ಯ ಸಮಸ್ಯೆಗಳುಳ್ಳ ಮನುಷ್ಯರಿಗೆ ಕೋವಿಡ್ ಲಸಿಕೆಗಳನ್ನು ನೀಡಲು ಹಿಂದೇಟು ಹಾಕಲಾಗುತ್ತಿದೆ. ಆದರೆ ಈ ಮೃಗಾಲಯದಲ್ಲಿ ಲಸಿಕೆ ಪಡೆದ ಒಂದು ಒರಾಂಗುಟಾನ್ ಕುತೂಹಲ ಮೂಡಿಸಿದೆ. ಏಕೆಂದರೆ ಸುಮಾತ್ರಾ ಮೂಲದ ಕರೆನ್ ಎಂಬ ಹೆಸರಿನ 28 ವರ್ಷದ ಹೆಣ್ಣು ಒರಾಂಗುಟಾನ್, 1994ರಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಡುವ ಮೂಲಕ ಸುದ್ದಿಯಾಗಿತ್ತು.ಜಗತ್ತಿನಲ್ಲಿಯೇ ಓಪನ್ ಹಾರ್ಟ್ ಸರ್ಜರಿಗೆ ಒಳಗಾದ ಮೊದಲ ವಾನರ ಜಾತಿಯ ಪ್ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಅಂದಹಾಗೆ, ಈ ಲಸಿಕೆಗಳು ಮನುಷ್ಯರಿಗಾಗಿ ಸಿದ್ಧಪಡಿಸಿದ್ದವಲ್ಲ. ನಾಯಿ ಹಾಗೂ ಬೆಕ್ಕುಗಳಿಗಾಗಿ ಮೂಲತಃ ತಯಾರಿಸಿದ್ದ ಲಸಿಕೆಗಳ ಎರಡು ಡೋಸ್‌ಗಳನ್ನು ಒಂಬತ್ತು ಪ್ರಾಣಿಗಳಿಗೆ ನೀಡಲಾಗಿದೆ. ಇದುವರೆಗೂ ಈ ಬೃಹತ್ ವಾನರಗಳಲ್ಲಿ ಯಾವುದೇ ಅಡ್ಡಪರಿಣಾಮ ಕಂಡುಬಂದಿಲ್ಲ, ಎಲ್ಲವೂ ಆರೋಗ್ಯವಾಗಿವೆ ಎಂದು ಮೃಗಾಲಯದ ವಕ್ತಾರರು ತಿಳಿಸಿದ್ದಾರೆ.
ಜೋಟಿಸ್ ಎಂಬ ಪಶು ವೈದ್ಯಕೀಯ ಔಷಧ ಕಂಪೆನಿ ತಯಾರಿಸಿದ ಲಸಿಕೆಯನ್ನು ವಾನರಗಳ ಮೇಲೆ ಪ್ರಯೋಗ ಮಾಡಿರಲಿಲ್ಲ. ಆದರೆ ಈ ರೀತಿ ತಯಾರಿಸಿದ ಲಸಿಕೆಗಳನ್ನು ಬಹುತೇಕ ಪ್ರಾಣಿಗಳಿಗೆ ನೀಡುವುದರಿಂದ ಈ ಲಸಿಕೆಯನ್ನೂ ನೀಡಲಾಗಿದೆ.
ಜನವರಿಯಲ್ಲಿ ಸ್ಯಾನ್ ಡಿಯಾಗೋ ಸಫಾರಿ ಪಾರ್ಕ್‌ನಲ್ಲಿನ ಎಂಟು ಗೋರಿಲ್ಲಾಗಳ ಗುಂಪಿನಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದ್ದು ಆತಂಕಕ್ಕೆ ಕಾರಣವಾಗಿತ್ತು. ಇವುಗಳಲ್ಲಿ ನ್ಯುಮೋನಿಯಾ ಮತ್ತು ಹೃದಯ ಕಾಯಿಲೆಯಿಂದ ಬಳಲುತ್ತಿರುವ 48 ವರ್ಷದ ವಿನ್‌ಸ್ಟನ್ ಎಂಬ ಗೊರಿಲ್ಲಾ ಕೂಡ ಸಾಕಷ್ಟು ಚೇತರಿಸಿಕೊಂಡಿದೆ. ಈ ಗೊರಿಲ್ಲಾಗಳು ವೈರಸ್ ವಿರುದ್ಧ ಪ್ರತಿರಕ್ಷಣಾ ಸಾಮರ್ಥ್ಯವನ್ನು ಬೆಳೆಸಿಕೊಂಡಿವೆ. ಹೀಗಾಗಿ ಅವುಗಳಿಗೆ ಕೋವಿಡ್ ಲಸಿಕೆ ನೀಡಿಲ್ಲ. ಒರಾಂಗುಟಾನ್ ಮತ್ತು ಬೊನೊಬೊಸ್‌ಗಳಲ್ಲಿ ವೈರಸ್ ಹರಡುವ ಅಪಾಯ ಹೆಚ್ಚು ಎಂದು ಪರಿಗಣಿಸಿದ್ದರಿಂದ ಅವುಗಳಿಗೆ ಮೊದಲು ಲಸಿಕೆ ನೀಡಲಾಗಿದೆ.