ರಾಜಕೋಟ್: ಗುಜರಾತಿನ ರಾಜ್‌ಕೋಟ್ ನಗರದಲ್ಲಿ ದುಡ್ಡು ಪಡೆದು ಜನರಿಗೆ ಸುಳ್ಳು ಕೋವಿಡ್ ನೆಗೆಟೀವ್ ಸರ್ಟಿಫಿಕೇಟ್ಗಳನ್ನು ಒದಗಿಸುತ್ತಿದ್ದ ಲ್ಯಾಬ್ ಏಜೆಂಟ್ ಒಬ್ಬನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪರವಾನಗಿ ಇಲ್ಲದೆ ಹೋಂ ಸ್ಯಾಂಪಲ್ ಕಲೆಕ್ಷನ್ ಸೆಂಟರ್ ನಡೆಸುತ್ತಿದ್ದ ಆರೋಪಿ ಪರಾಗ್ ಜೋಶಿ, ರಕ್ತದ ಸ್ಯಾಂಪಲ್ ಕೂಡ ಸಂಗ್ರಹಿಸದೆ ನೆಗೆಟೀವ್ ವರದಿಯನ್ನು ನೀಡುತ್ತಿದ್ದ ಎನ್ನಲಾಗಿದೆ.
ಕರೊನಾ ನೆಗೆಟಿವ್ ವರದಿಯ ಅಗತ್ಯ ಇದ್ದವರಿಗೆ ತಲಾ 1,500 ರೂ.ಗಳನ್ನು ಪಡೆದು ಜೋಶಿ ಈ 'ಸೇವೆ' ಒದಗಿಸುತ್ತಿದ್ದುದು ಬೆಳಕಿಗೆ ಬಂದಿದೆ. 'ತನ್ನ ಗ್ರಾಹಕರ ಹೆಸರಿನ ದಾಖಲಾತಿಗಳೊಂದಿಗೆ ಮತ್ಯಾರದೋ ರಕ್ತದ ಸ್ಯಾಂಪಲ್ಅನ್ನು ಲ್ಯಾಬೋರೇಟರಿಗೆ ಪರೀಕ್ಷೆಗೆ ಕಳುಹಿಸುತ್ತಿದ್ದ. ಪರೀಕ್ಷೆ ನಡೆಸಿದ ಲ್ಯಾಬರೇಟರಿಯು ದಾಖಲಾತಿಯಲ್ಲಿರುವ ಹೆಸರಿಗೆ ಕರೊನಾ ನೆಗೆಟೀವ್ ಸರ್ಟಿಫಿಕೇಟ್ ನೀಡುತ್ತಿತ್ತು' ಎಂದು ಅಧಿಕಾರಿಗಳು ಅವನ ಕಾರ್ಯವೈಖರಿಯನ್ನು ವಿವರಿಸಿದ್ದಾರೆ.
ರಾಜಕೋಟ್ ಸಹಾಯಕ ವೈದ್ಯಾಧಿಕಾರಿ ಡಾ. ಪರಾಗ್ ಚುನರ ಅವರ ದೂರಿನ ಮೇಲೆ ಗಾಂಧೀಗ್ರಾಮ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಜೊತೆಗೆ ಡಿಸಾಸ್ಟರ್ ಮಾನೇಜ್ಮೆಂಟ್ ಕಾಯ್ದೆ ಮತ್ತು ಗುಜರಾತ್ ಮೆಡಿಕಲ್ ಪ್ರಾಕ್ಟಿಷನರ್ಸ್ ಕಾಯ್ದೆಯ ಉಲ್ಲಂಘನೆಯ ಆರೋಪಗಳನ್ನೂ ಸಲ್ಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.