ಜೈಪುರ : ಭಾರತೀಯ ಸೇನೆ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಆಕಾಶ್ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.
ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಪೋಖ್ರಾನ್ ಪ್ರದೇಶದಲ್ಲಿ ಮಂಗಳವಾರ ದೇಶೀ ನಿರ್ಮಿತ ಕ್ಷಿಪಣಿ ಪರೀಕ್ಷೆ ನಡೆಸಲಾಗಿದ್ದು, ಈ ಕ್ಷಿಪಣಿಯನ್ನು ಭಾರತೀಯ ವಾಯುಪಡೆ (ಐಎಎಫ್) ಬಳಸಲಿದೆ.
40 ಕಿ.ಮೀ ದೂರದಲ್ಲೇ ದೊಡ್ಡ ವೈಮಾನಿಕ ದಾಳಿಯನ್ನು ತಡೆಯುವ ಸಾಮರ್ಥ್ಯದೊಂದಿಗೆ ಇದನ್ನು ನಿರ್ಮಿಸಲಾಗಿದೆ. ಶತ್ರು ಸೈನ್ಯದ ಅತಿ ವೇಗದ ವೈಮಾನಿಕ ದಾಳಿಯ ಗುರಿಯನ್ನು ಆಕಾಶ್ ಕ್ಷಿಪಣಿ ನಾಶಪಡಿಸುತ್ತದೆ.
ಭಾರತೀಯ ಸೇನೆಯ ವಾಯು ಕ್ಷಿಪಣಿ ವ್ಯವಸ್ಥೆಯಲ್ಲಿ ಅತ್ಯಂತ ಪ್ರಬಲವಾದ ಮತ್ತೊಂದು ಮೈಲಿಗಲ್ಲು ಇದಾಗಿದೆ ಎಂದು ಭಾರತೀಯ ಸೈನ್ಯದ ಸೌತ್ ವೆಸ್ಟರ್ನ್ ಕಮಾಂಡ್ ತನ್ನ ಅಧಿಕೃತ ಟ್ವಿಟ್ಟರ್ನಲ್ಲಿ ಹೇಳಿದೆ.