ನವದೆಹಲಿ: ವಿದೇಶಗಳಿಗೆ ರಫ್ತು ಮಾಡುವುದಕ್ಕೂ ಮುನ್ನ ನಮ್ಮ ದೇಶದ ನಾಗರೀಕರಿಗೆ ಮೊದಲು ಕೊರೋನಾ ಲಸಿಕೆ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಚಾಟಿ ಬೀಸಿದೆ.
ವಕೀಲರಿಗೂ ಆದ್ಯತೆ ಮೇಲೆ ಲಸಿಕೆ ವಿತರಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ನಾವು ನಮ್ಮ ಲಸಿಕೆ ವಿತರಣೆಯ ಪೂರ್ಣ ಸಾಮಥ್ರ್ಯ ಬಳಸಿಕೊಳ್ಳುತ್ತಿಲ್ಲ. ನಮ್ಮ ಜನರಿಗೆ ಲಸಿಕೆ ನೀಡುವ ಬದಲು ಒಂದೋ ನಾವು ವಿದೇಶಗಳಿಗೆ ದಾನ ಮಾಡುತ್ತಿದ್ದೇವೆ. ಇಲ್ಲವೇ ಮಾರಾಟ ಮಾಡುತ್ತಿದ್ದೇವೆ. ಹೀಗಾಗಿ ಎಲ್ಲೋ ಒಂದು ಕಡೆ ಜವಾಬ್ದಾರಿ ಮತ್ತು ಅವಸರದ ಅಗತ್ಯ ಕಂಡು ಬರುತ್ತಿದೆ ಎಂದು ಬೇಸರ ಅಭಿಪ್ರಾಯ ವ್ಯಕ್ತಪಡಿಸಿತು.
ಅಲ್ಲದೆ, ಕೋವಿಡ್ ಲಸಿಕೆ ವಿತರಣೆ ವೇಳೆ ನಿರ್ದಿಷ್ಟ ವಯೋಮಿತಿ ಮತ್ತು ಕೆಲವು ನಿಬಂಧನೆಗಳಿಗೆ ಒಳಪಟ್ಟವರಿಗೆ ಮಾತ್ರವೇ ಲಸಿಕೆ ವಿತರಣೆಯ ಹಿಂದಿನ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದೆ.
ಇದೇ ವೇಳೆ ನಿಮ್ಮದೈನಂದಿನ/ವಾರ/ಮಾಸಿಕ ಲಸಿಕಾ ಉತ್ಪಾದನಾ ಸಾಮಥ್ರ್ಯ ಎಷ್ಟು? ಈಗ ಉತ್ಪಾದಿಸಿರುವ ಪ್ರಮಾಣ/ ಸಂಗ್ರಹದಲ್ಲಿರುವ ಲಸಿಕೆಯ ಪ್ರಮಾಣ/ ಲಸಿಕೆ ಉತ್ಪಾದನೆಯನ್ನು ಇನ್ನು ಎಷ್ಟು ಪ್ರಮಾಣದಲ್ಲಿ ಹೆಚ್ಚಿಸಬಹುದು ಎಂಬುದರ ಮಾಹಿತಿ ನೀಡಿ ಎಂದು ಪುಣೆಯ ಸೀರಂ ಇನ್ಸಿಟ್ಯೂಟ್ ಮತ್ತು ಹೈದರಬಾದ್'ನ ಭಾರತ್ ಬಯೋಟೆಕ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.
ಕೇಂದ್ರ ಸರ್ಕಾರ ಮೊದಲ 2 ಹಂತದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸಿಬ್ಬಂದಿ, 3ನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರು ಮತ್ತು ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ವಿತರಿಸುವ ಯೋಜನೆ ರೂಪಿಸಿದೆ.