ರಾಜ್ಯದಲ್ಲಿ ಇದೀಗ ವಿಧಾನ ಸಭಾ ಚುನಾವಣೆಯ ಕಾವು ಈಗಿನ ಬಿಸಿಲಿನಷ್ಟೇ ತೀವ್ರ ಸ್ವರೂಪ ಪಡೆಯುತ್ತಿದೆ. ಪಕ್ಷಗಳು ಒಂದೊಂದಾಗಿ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಹಿರಂಗಪಡಿಸುತ್ತಿದೆ. ಈಗಾಗಲೇ ರಾಜ್ಯ ಆಡಳಿತರೂಢ ಸಿಪಿಐಎಂ-ಸಿಪಿಎಂ, ಪ್ರತಿಪಕ್ಷದ ಅಂಗಪಕ್ಷ ಮುಸ್ಲಿಂಲೀಗ್ ಸಹಿತ ಹಲವು ಪಕ್ಷಗಳು ತಮ್ಮ ಅಭ್ಯರ್ಥಿಗಳ ಸ್ಥಾನ ಹಂಚಿಕೆಯ ಪಟ್ಟಿಯನ್ನು ಬಹಿರಂಗಪಡಿಸಿದೆ.ಕಾಂಗ್ರೆಸ್ಸ್ ಇಂದು ಸ್ಥಾನ ಹಂಚಿಕೆಯನ್ನು ತಿಳಿಸಲಿದೆ. ಬಿಜೆಪಿ ಇಂದು ಅಥವಾ ಈ ವಾರಾಂತ್ಯದೊಳಗೆ ಅಭ್ಯರ್ಥಿಗಳ ಪಟ್ಟಿಯನ್ನು ತಿಳಿಸಲಿದೆ.
ಆದರೆ ಇದರಲ್ಲಿ ಏನಪ್ಪಾ ವಿಶೇಷ ಎಂದರೆ......ಈ ಹಿಂದೆಯೂ ಇತ್ತು....ಆದರೆ ಈಗದು ಮತ್ತಷ್ಟು ಪ್ರಬಲಗೊಳ್ಳುತ್ತಿದೆ. ಏನೆಂದು ಬಲ್ಲಿರಾ.........
"ಭಿನ್ನಮತ"
ಬಹುತೇಕ ಎಲ್ಲಾ ಪಕ್ಷಗಳಲ್ಲೂ ಈ ಬಾರಿ ದೊಡ್ಡಮಟ್ಟದ ಭಿನ್ನಮತ ಬಿಗುಗೊಳ್ಳುತ್ತಿದೆ. ಈ ಬಗ್ಗೆ ಭಾರೀ ಪ್ರಮಾಣದ ಆತ್ಮಾವಲೋಕನ ಈಗಿಂದೀಗಲೇ ಎಲ್ಲರೂ ಮಾಡದಿದ್ದರೆ ರಾಜಕೀಯ ಪಕ್ಷಗಳಿಗೆ, ಭಾರತದ ಶ್ರೇಷ್ಠ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬೆಲೆಯೇ ಇನ್ನಿಲ್ಲದಂತಾದೀತೆಂಬುದು ನಿರ್ವಿವಾದ.
ಇಂತಹ ಅವಸವ್ಯಗಳಿಗೆ ಕಾರಣ ಏನು?, ಪರಿಣಾಮಗಳೇನು ಮತ್ತು ಪರಿಹಾರ ಎಂತೆಂದು ಅವಲೋಕನಗೈಯ್ಯದ ವಿನಹಃ ಯಾವ ಪಕ್ಷವಾಗಲಿ, ವ್ಯಕ್ತಿಯಾಗಲಿ ಎತ್ತರಕ್ಕೆ ಏರಲಾರ. ಅಶಾಂತಿಗೆ ಕಾರಣವಾಗುವ ಇಂತಹ ಬೆಳವಣಿಗೆ ಕ್ರಮೇಣ ನಿಶ್ಚಲತೆ ಅಥವಾ ಪ್ರಜಾಪ್ರಭುತ್ವದ ಸಂಪೂರ್ಣ ಅವನತಿಗೆ ಕಾರಣವಾಗುತ್ತದೆ.
ಅರ್ಥವಾಗಬೇಕಾದರೆ......................
ಅದೊಂದು ದೊಡ್ಡ ವ್ಯಾಪಾರಿ ಮಳಿಗೆ. ಅಜ್ಜ ತಮ್ಮ ಮೊಮ್ಮಗನನ್ನು ಕರೆದು ತಂದಿದ್ದರು. ಆತ ಮಹಾ ಉಪದ್ವ್ಯಾಪಿ. ಒಂದು ಕ್ಷಣ ಸುಮ್ಮನಿರುವವನಲ್ಲ. ಹುಡುಗ ಓಡಿದ, ಯಾವುದೋ ಪ್ಲಾಸ್ಟಿಕ್ ಡಬ್ಬಿಯನ್ನು ಹಿಡಿದೆಳೆದ. ಧಡಧಡನೇ ಹತ್ತಾರು ಡಬ್ಬಿಗಳು ಉರುಳಿದವು, ಭಾರೀ ಸಪ್ಪಳವಾಯ್ತು. ಮಳಿಗೆಯ ಸೇವಕರು ಓಡಿ ಬಂದರು. ಅಜ್ಜ ಓಡಿ ಬಂದರು, 'ಗುಂಡಪ್ಪ, ಶಾಂತನಾಗಪ್ಪಾ, ಕೋಪ ಬೇಡಪ್ಪಾ' ಎನ್ನುತ್ತಾ ನಿಧಾನವಾಗಿ ಮೊಮ್ಮಗನನ್ನು ಕರೆದು ಮುಂದೆ ನಡೆದರು. ಅವರು ಏನನ್ನೋ ತೆಗೆದುಕೊಳ್ಳಲು ಒಂದೆಡೆಗೆ ಹೋದಾಗ ಮೊಮ್ಮಗ ಮತ್ತೊಂದೆಡೆಗೆ ನುಗ್ಗಿದ. ನೇತಾಡುತ್ತಿದ್ದ ಬಟ್ಟೆಯನ್ನು ಹಿಡಿದು ಎಳೆದ. ಅಯ್ಯೋ, ಆ ಬಟ್ಟೆಯೊಂದಿಗೆ ನೂರಾರು ಬಟ್ಟೆಯ ಸುರುಳಿಗಳು ಉರುಳುರುಳಿ ಬಂದವು. ಜನ ಹೋ ಎಂದು ಕಿರಿಚಿದರು. ಮ್ಯಾನೇಜರ್ ಕೂಗುತ್ತಾ ಬಂದ. ಎಲ್ಲರಿಗೂ ಹುಡುಗನ ಮೇಲೆ ಕೋಪ. ಅಜ್ಜ ಮತ್ತೆ ಬಂದರು. ಮಗುವನ್ನು ರಟ್ಟೆ ಹಿಡಿದು ಬದಿಗೆ ಕರೆತಂದರು. 'ಗುಂಡಪ್ಪ, ಕೋಪ ಬೇಡಪ್ಪಾ, ಇನ್ನೊಂದು ಹತ್ತು ನಿಮಿಷ ಹೇಗಾದರೂ ತಡೆದುಕೋ. ಹತ್ತೇ ನಿಮಿಷ. ಎಲ್ಲ ಮುಗಿದುಹೋಗುತ್ತದೆ'.
ಅಂಗಡಿಯ ಕೆಲಸ ಬೇಗ ಮುಗಿಸೋಣವೆಂದು ಅಜ್ಜ ಕೊನೆಗೆ ತರಕಾರಿಯ ಅಂಗಡಿಗೆ ಬಂದು ಬೇಕಾದ ತರಕಾರಿಯನ್ನು ಕೊಳ್ಳುತ್ತಿದ್ದರು. ಆಗ ಹಿಂದೆ ಯಾರೋ ಹೋ ಹೋ ಎಂದು ಕೂಗಿದಂತಾಯಿತು. ತಿರುಗಿ ನೋಡಿದರೆ ಇಬ್ಬರು ಹೆಣ್ಣುಮಕ್ಕಳು ನೀರಿನಲ್ಲಿ ಜಾರಿ ದೊಪ್ಪನೆ ಬಿದ್ದರು. ತರಕಾರಿಯವನಿಗೆ ಈ ನೀರು ಹೇಗೆ ಬಂತು ಎಂಬ ಆಶ್ಚರ್ಯ. ನೋಡಿದರೆ ಈ ಹುಡುಗ ಅಲ್ಲಿದ್ದ ಕುಡಿಯುವ ನೀರಿನ ನಲ್ಲಿಯನ್ನು ತಿರುಗಿಸಿ ಬಿಟ್ಟಿದ್ದಾನೆ. ನೀರು ಹರಿದು, ಮೊದಲೇ ನುಣುಪಾದ ನೆಲ ಜಾರಿಕೆಯಾಗಿದೆ. ಒಂದಿಬ್ಬರು ಆ ಹುಡುಗನನ್ನು ಹೊಡೆಯಲೇ ಹೋದರು. ಅಜ್ಜ ಮುನ್ನುಗ್ಗಿ ಹೋಗಿ ಮೊಮ್ಮಗನನ್ನು ದೂರ ಎಳೆದುಕೊಂಡು ಹೋಗುತ್ತ, 'ಗುಂಡಣ್ಣಾ, ಯಾಕಪ್ಪಾ ಕೋಪ? ಸ್ವಲ್ಪ ತಡೆದುಕೋ. ಇನ್ನು ಮುಗಿದೇ ಹೋಯಿತಲ್ಲ. ಶಾಂತನಾಗು' ಎನ್ನುತ್ತಿದ್ದರು. ಇವರನ್ನು ಗಮನಿಸುತ್ತಿದ್ದ ಮಹಿಳೆಯೊಬ್ಬಳು ಹತ್ತಿರ ಬಂದು, 'ಸರ್, ನಿಮ್ಮ ತಾಳ್ಮೆಗೆ ಸಲಾಂ. ನಿಮ್ಮ ಮೊಮ್ಮಗ ಗುಂಡಣ್ಣ ಇಷ್ಟು ಕೀಟಲೆ ಮಾಡುತ್ತಿದ್ದರೂ ನೀವು ಕೋಪ ಮಾಡಿಕೊಳ್ಳದೇ ಅವನನ್ನು ಸಂತೈಸುತ್ತಿದ್ದೀರಲ್ಲ ಅದು ಆಶ್ಚರ್ಯ' ಎಂದರು. ಆಗ ಅಜ್ಜ, 'ಅಮ್ಮ, ಅವನ ಹೆಸರು ಕಿಟ್ಟಣ್ಣ' ಎಂದರು. 'ಹಾಗಾದರೆ ಗುಂಡಣ್ಣ ಶಾಂತನಾಗು ಎಂದು ಹೇಳುತ್ತಿದ್ದಿರಲ್ಲ?' ಎಂದು ಕೇಳಿದಾಗ ಅಜ್ಜ ಹೇಳಿದರು, 'ಅಮ್ಮಾ, ನಾನೇ ಗುಂಡಣ್ಣ. ಆ ಮಾತನ್ನು ನನಗೇ ಹೇಳಿಕೊಳ್ಳುತ್ತಿದ್ದೆ' ಎಂದರು!
ನಮಗೆ ಮನಸ್ಸು ಕುದಿದಾಗ, ಹಾಗೋ, ಹೀಗೋ ಅದನ್ನ ಸಂತೈಸಿಕೊಳ್ಳಬೇಕು. ಕೆಲವೊಮ್ಮೆ ಅದನ್ನು ಪ್ರೀತಿಯಿಂದ, ಕೆಲವೊಮ್ಮೆ ಬಿಗಿಯಿಂದ ಶಿಕ್ಷಿಸುತ್ತ, ತಿದ್ದುತ್ತ, ಶಾಂತಿಯನ್ನು ಅರಸಬೇಕು. ನಮ್ಮ ಬದುಕಿನಲ್ಲಿ ಶಾಂತಿಗೆ ಸಕಲ ಪ್ರಯತ್ನಗಳನ್ನು ಮಾಡುತ್ತಿರಬೇಕು. ಅದರ ವಿಧಾನಗಳನ್ನು ನಾವೇ ಕಂಡುಕೊಳ್ಳಬೇಕು.
ಶಾಂತಿ-ಸಮಾಧಾನಗಳೇ ಒಟ್ಟು ಲಕ್ಷ್ಯವೆಂಬುದನ್ನು ಮರೆತವರಿಗೆ(ಮುಖ್ಯವಾಗಿ ರಾಜ-ಕಾರಣಿಗಳಿಗೆ) ಬಹುಷಃ ಇದು ಅರ್ಥವಾಗಬೇಕು. ಅದಲ್ಲದಿದ್ದರೆ ಮತದಾರ ಪ್ರಭುಗಳು(?) ಅರ್ಥಮಾಡಿಸಿ ಕೊಡುವರು ಎಂಬುದಷ್ಟೇ ಹೇಳಲಿರುವ ಸೂಚನೆ. ಇಲ್ಲದಿದ್ದರೆ ಯುರೋಪ್ ರಾಷ್ಟ್ರಗಳಂತೆ, ಹೆಚ್ಚೇಕೆ ಪಾಕಿಸ್ಥಾನದಂತೆ ಕ್ಷಿಪ್ರ ಕಾರ್ಯಾಚರಣೆಗಳಿಗೆ ಕಾರಣವಾಗಬಹುದು!