ಡೆಹ್ರಾಡೂನ್: ಉತ್ತರಾಖಂಡ ಸರಕಾರದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿನಿಂದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮಂಗಳವಾರ ಸಂಜೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾಗಿದ್ದ ಮುಖ್ಯಮಂತ್ರಿ ಸ್ಥಾನವನ್ನು ಯಾರು ಅಲಂಕರಿಸಲಿದ್ದಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದ್ದು, ಬಿಜೆಪಿ ಸಂಸದ ತಿರಥ್ ಸಿಂಗ್ ರಾವತ್ ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಬುಧವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದರು.
2013 ಹಾಗೂ 2015ರಲ್ಲಿ ಉತ್ತರಾಖಂಡದ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ತಿರಥ್ ಸಿಂಗ್ ರಾವತ್ ಇದಕ್ಕೂ ಮೊದಲು ಶಾಸಕರಾಗಿಯೂ ಆಯ್ಕೆಯಾಗಿದ್ದರು. ರಾವತ್ ಜೊತೆಗೆ ಧನ್ ಸಿಂಗ್ ರಾವತ್, ಭಗತ್ ಸಿಂಗ್ ಕೋಶಿಯಾರಿ, ರಮೇಶ ಪೋಕ್ರಿಯಾಲ್ ನಿಶಾಂಕ್ ಸಿಎಂ ರೇಸ್ ನಲ್ಲಿದ್ದರು. ಕೊನೆಗೆ 56 ವರ್ಷದ ತಿರಥ್ ಸಿಂಗ್ ರಾವತ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.