ನವದೆಹಲಿ: ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು ಶುಕ್ರವಾರ ಕರೆ ನೀಡಿರುವ 'ಭಾರತ್ ಬಂದ್'ಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಸತ್ಯಾಗ್ರಹ' ಎನ್ನುವುದು ದೌರ್ಜನ್ಯ, ಅನ್ಯಾಯ ಮತ್ತು ದುರಹಂಕಾರವನ್ನು ಕೊನೆಗೊಳಿಸುವುದಾಗಿ ಭಾರತದ ಇತಿಹಾಸ ತೋರಿಸಿದೆ' ಎಂದು ಹೇಳಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, 'ಈ ಚಳವಳಿ ದೇಶದ ಹಿತಕ್ಕಾಗಿ ಮತ್ತು ಶಾಂತಿಯುತವಾಗಿ ನಡೆಯಬೇಕು' ಎಂದು ಉಲ್ಲೇಖಿಸಿದ್ದಾರೆ.
ಕೃಷಿ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ಕಳೆದ ನಾಲ್ಕು ತಿಂಗಳುಗಳಿಂದ ದೆಹಲಿಯ ಗಡಿಭಾಗಗಳಾದ ಸಿಂಘು, ಗಾಜಿಪುರ ಮತ್ತು ಟಿಕ್ರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಶುಕ್ರವಾರ ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಭಾರತ್ ಬಂದ್ ನಡೆಸಿತು.