ನವದೆಹಲಿ/ಢಾಕಾ: ದೇಶಾದ್ಯಂತ ಮಹಾಮಾರಿ ಕರೊನಾ ಲಾಕ್ಡೌನ್ ಘೋಷಿಸಿದ ಒಂದು ವರ್ಷದ ಬಳಿಕ ಪ್ರಧಾನಿ ಮೋದಿ ಅವರು ತಮ್ಮ ಮೊದಲ ವಿದೇಶ ಪ್ರವಾಸವನ್ನು ಕೈಗೊಂಡಿದ್ದಾರೆ. ಇಂದಿನಿಂದ ಎರಡು ದಿನಗಳ ಕಾಲ ಪ್ರಧಾನಿ ಬಾಂಗ್ಲಾದೇಶ ಪ್ರವಾಸದಲ್ಲಿರಲಿದ್ದಾರೆ.
ಪಾಕಿಸ್ತಾನದಿಂದ ಬಾಂಗ್ಲಾದೇಶ ವಿಮೋಚನೆಗೊಂದ 50 ವರ್ಷಗಳ ಸಂಭ್ರಮಾಚರಣೆ ಮತ್ತು ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಇಷ್ಟೇ ಅಲ್ಲದೆ, ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾಗಿ 50 ವರ್ಷ ಪೂರೈಸಿದ ಸಂಭ್ರಮವು ಸಹ ನಡೆಯಲಿದೆ.
ನಿನ್ನೆಯಷ್ಟೇ ಕರೊನಾ ನಂತರದ ಮೊದಲ ಪ್ರವಾಸದ ಬಗ್ಗೆ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ಕೋವಿಡ್ 19 ಸಂಕಷ್ಟದ ನಂತರದಲ್ಲಿ ಕೈಗೊಳ್ಳುತ್ತಿರುವ ಮೊದಲ ವಿದೇಶ ಪ್ರವಾಸ ಇದು. ನಮ್ಮ ಪ್ರೀತಿಯ ನೆರೆಯ ರಾಷ್ಟ್ರದ ಜತೆಗೆ ನಮಗೆ ಆಳವಾದ ಸಾಂಸ್ಕೃತಿಕ, ಭಾಷಾ ಮತ್ತು ಪರಂಪರೆಯ ಬಾಂಧವ್ಯವಿದೆ. ಬಂಗಬಂಧುವಿನ ಸಮಾಧಿಗೆ ತೆರಳಿ ಗೌರವ ಸಲ್ಲಿಸುವುದಕ್ಕೆ, ಅವರ ನೆನಪುಗಳನ್ನು ಸ್ಮರಿಸುವುದಕ್ಕೆ ಎದುರುನೋಡುತ್ತಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾ ದೇಶದ ರಾಷ್ಟ್ರಪತಿ ಶೇಖ್ ಮುಜೀಬುರ್ ರಹಮಾನ್ ಅವರ ಜನ್ಮಶತಮಾನೋತ್ಸವ ಕೂಡ ಶುಕ್ರವಾರ ಆಚರಿಸಲ್ಪಡುತ್ತಿದೆ. ಪುರಾತನ ಶಕ್ತಿಪೀಠಗಳಲ್ಲಿ ಒಂದಾದ ಜಶೋರೇಶ್ವರಿ ಕಾಳಿ ದೇವಸ್ಥಾನಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವೆ. ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಗಮನಾರ್ಹ ಚರ್ಚೆಗಳಲ್ಲೂ ಭಾಗಿಯಾಗುತ್ತೇನೆ ಎಂದು ಮೋದಿ ಹೇಳಿದ್ದಾರೆ.