ಮುಳ್ಳೇರಿಯ: ಪಯಸ್ವಿನಿ ನದಿಗೆ ಕುಂಟಾರಿನಲ್ಲಿನಿರ್ಮಿಸಿದ ಚೆಕ್ ಡ್ಯಾಂ ನಲ್ಲಿ ನೀರು ಭರ್ತಿ ತುಂಬಿಕೊಂಡಿದೆ. ಈ ವರ್ಷ ಸ್ಥಳೀಯ ಅಗತ್ಯಗಳಿಗೆ ದೊಡ್ಡ ಪ್ರಮಾಣದ ನೀರಿನ ಕೊರತೆ ಉಂಟಾಗದು ಎಂದು ಅಭಿಪ್ರಾಯಪಡಲಾಗುತ್ತಿದೆ.
ಗ್ರಾಪಂಗೆ ಕುಡಿಯುವ ನೀರು ಒದಗಿಸುವ ಕಾಮಗಾರಿಯನ್ನು 2014ರ ಏಪ್ರಿಲ್ ತಿಂಗಳಲ್ಲಿ ಆರಂಭಿಸಲಾಗಿತ್ತು. ಕುಂಟಾರಿನ ಜನರ ವಿರೋಧದ ಕಾರಣದಿಂದಾಗಿ ಬಾವಿ ಕೊರೆಯುವ ಕಾಮಗಾರಿ ನಿಲ್ಲಿಸಬೇಕಾಯಿತು. ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಯೋಜನೆ ಬಗ್ಗೆ ಅಧಿಕೃತರು ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ, ಪಯಸ್ವಿನಿ ನದಿಗೆ ಕುಂಟಾರು ಪ್ರದೇಶದಲ್ಲಿ ನಬಾರ್ಡ್ ನೇತೃತ್ವದಲ್ಲಿಕಿಂಡಿ ಅಣೆಕಟ್ಟು ನಿರ್ಮಿಸಲು ನಿರ್ಧರಿಸಲಾಯಿತು.
ಕುಂಟಾರು ತೂಗುಸೇತುವೆಗಿಂತ 75 ಮೀ.ನಷ್ಟು ದೂರದಲ್ಲಿ3 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು(ಚೆಕ್‍ಡ್ಯಾಂ) ನಿರ್ಮಿಸಲಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಈಗ ಪಯಸ್ವಿನಿ ನದಿಯಲ್ಲಿನೀರಿನ ಹರಿವು ಕಡಿಮೆಯಾದ ಕಾರಣ ಫೈಬರ್ ಹಲಗೆಗಳ ಶಟರ್ ಹಾಕಲಾಗಿದ್ದು, ನೀರು ತುಂಬಿಕೊಂಡು ಅಣೆಕಟ್ಟಿನ ಮೇಲಿನಿಂದ ಹರಿಯುತ್ತಿದೆ. ನದಿಯಲ್ಲಿಸುಮಾರು 400 ಮೀ.ಗಳ ತನಕ ನೀರು ಹರಡಿಕೊಂಡಿದೆ.
ಅಣೆಕಟ್ಟಿನಲ್ಲಿಮೇ ತಿಂಗಳ ತನಕ ನೀರು ತುಂಬಿಕೊಂಡಿದ್ದರೆ ನೀರಿನ ಸಮಸ್ಯೆಯೇ ಎದುರಾಗದು. ಈ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಸ್ಥಳೀಯರಿಗೂ ನೀರಿನ ಕೊರತೆ ಎದುರಾಗದು ಎಂಬ ಆಶಾಭಾವ ಮೂಡಿದೆ. ಕೃಷಿಗೆ ನೀರು ಪೂರೈಸುವ ಓಟೆ ಜಲ ವಿತರಣೆ ಯೋಜನೆಗೆ ನೀರಿನ ಕೊರತೆ ಉಂಟಾಗದು. ಕೇವಲ 2 ಮೀ. ಎತ್ತರದ ಈ ಕಿಂಡಿ ಅಣೆಕಟ್ಟನ್ನು 3 ಮೀ. ಎತ್ತರಿಸಿದ್ದರೆ ಈ ಊರಿನ ಸಾಕಷ್ಟು ಮಂದಿಗೆ ಪ್ರಯೋಜನವಾಗುತ್ತಿತ್ತು.
ಬೆಳ್ಳೂರಿಗೆ ಕುಂಟಾರಿನ ನೀರು:
ಬೆಳ್ಳೂರು ಗ್ರಾಪಂ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ವಿಶ್ವ ಬ್ಯಾಂಕ್ ನೆರವಿನೊಂದಿಗೆ ರಾಜ್ಯ ಸರ್ಕಾರ ಮತ್ತು ಗ್ರಾಪಂನ ಆರ್ಥಿಕ ಸಹಾಯದೊಂದಿಗೆ ಯೋಜನೆ ಸಿದ್ಧವಾಗಿದೆ. ಬೆಳ್ಳೂರು ಗ್ರಾಪಂನ 13 ವಾರ್ಡ್‍ಗಳ 1,126 ಕುಟುಂಬಗಳಿಗೆ ಕುಡಿಯುವ ನೀರು ಒದಸುವ ಸಲುವಾಗಿ 7.37 ಕೋಟಿ ರೂ. ವೆಚ್ಚದ ಬೃಹತ್ ಕುಡಿಯುವ ನೀರಿನ ಯೋಜನೆ ಇದು. ಕುಂಟಾರು ದೇಗುಲ ಸಮೀಪ ಪಯಸ್ವಿನಿ ನದಿಯಿಂದ ನೀರು ಹಾಯಿಸಲು ಬೇಕಾದ ಟ್ಯಾಂಕ್ ನಿರ್ಮಾಣ, ಮೋಟಾರು ಜೋಡಣೆ, ಕೊಳವೆ ಜೋಡಿಸುವ ಕೆಲಸ ಪೂರ್ಣಗೊಂಡು ವರ್ಷಗಳು ಕಳೆದರೂ ಪಯಸ್ವಿನಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣ ನಡೆಯದ ಕಾರಣ ಜಲ ವಿತರಣೆ ಆರಂಭಕ್ಕೆ ಮೀನಮೇಷ ಎಣಿಸಬೇಕಾಯಿತು. ಈ ವರ್ಷ ಮುಂದಿನ ಒಂದೆರಡು ವಾರಗಳಲ್ಲಿ ಅದು ಪೂರ್ಣ ಪ್ರಮಾಣದಲ್ಲಿ ಕಾರ್ಯಪ್ರವೃತ್ತವಾಗಬಹುದು.
ನದಿಯಲ್ಲಿವಾಹನ ಸಂಚಾರ ಅಸಾಧ್ಯ: ಬೇಸಿಗೆ ಬಂತೆಂದರೆ ಪಯಸ್ವಿನಿ ನದಿ ದಾಟಿ ವಾಹನಗಳು ಸಾಗುತ್ತವೆ. ನದಿಯಲ್ಲೇ ರಸ್ತೆಗಳ ನಿರ್ಮಾಣವಾಗುತ್ತದೆ. ಕುಂಟಾರು ದೇಗುಲ ಸಮೀಪದಿಂದ ನದಿ ದಾಟಿ ಚೆರ್ಲಕೈ, ಮಣಿಯೂರು, ಮಾಟೆಬಯಲು, ಅಡೂರು ಮತ್ತಿತರ ಕಡೆಗಳಿಗೆ ವಾಹನಗಳು ಸಾಗುತ್ತವೆ. ಆದರೆ ಕಿಂಡಿ ಅಣೆಕಟ್ಟು ನಿರ್ಮಾಣವಾದ ಕಾರಣ ಈ ವರ್ಷ ನದಿಯಲ್ಲಿ ವಾಹನ ದಾಟುವುದು ಅಷ್ಟು ಸುಲಭವಲ್ಲ. ರಸ್ತೆ ಸಾಗುವಲ್ಲಿ ಅಣೆಕಟ್ಟಿನ ನೀರು ತುಂಬಿಕೊಂಡಿದೆ. ನದಿಯಲ್ಲಿ ನೀರು ಕಡಿಮೆಯಾದರೆ ಮಾತ್ರ ಅಣೆಕಟ್ಟಿನ ನೀರಿನ ಸಂಗ್ರಹ ಕಡಿಮೆಯಾದೀತು. ಆದುದರಿಂದ ವಾಹನಗಳ ಸಂಚಾರಕ್ಕೆ ಅಣೆಕಟ್ಟು ಅಡ್ಡಿಯಾಗಬಹುದು. ಪಯಸ್ವಿನಿ ನದಿಗೆ ಇಂತಹ ಕಿಂಡಿ ಅಣೆಕಟ್ಟುಗಳು ಅಲ್ಲಲ್ಲಿ ನಿರ್ಮಾಣಗೊಂಡರೆ ಬೇಸಿಗೆಯಲ್ಲಿ ನೀರಿನ ಹಾಹಾಕಾರ ತಪ್ಪಿಸಲು ಸಾಧ್ಯವಾಗಬಹುದು.
ಅಭಿಮತ:
ಕುಂಟಾರು ಕಿಂಡಿ ಅಣೆಕಟ್ಟು ಆಶ್ರಯಿಸಿ ಬೆಳ್ಳೂರು ಗ್ರಾ.ಪಂ. ಜಲಕ್ಷಾಮ ನೀಗಲು 7.35 ಲಕ್ಷ ರೂ.ಗಳನ್ನು ವ್ಯಯಿಸುವ ಮೂಲಕ ಜಲನಿಧಿ ಯೋಜನೆಯನ್ವಯ 1,126 ಕ್ಕಿಂತಲೂ ಮಿಕ್ಕಿದ ಕುಟುಂಬಗಳಿಗೆ ಕುಡಿಯುವ ನೀರು ಒದಗಿಸುವ ಈ ಯೋಜನೆ ಹಲವು ಕಾರಣಗಳಿಂದ ಈವರೆಗೆ ಸಕಾಲಕ್ಕೆ ಜಾರಿಗೊಳಿಸಲಾಗಿಲ್ಲ. ಈಗ ಅಂತಿಮ ಹಂತದ ಸಿದ್ದತೆ ನಡೆಯುತ್ತಿದ್ದು, ಮುಂದಿನ ಒಂದೆರಡು ವಾರಗಳಲ್ಲಿ ಸರಬರಾಜು ಆರಂಭಗೊಳ್ಳುವುದು.
-ಶ್ರೀಧರ.ಎಂ
ಅಧ್ಯಕ್ಷರು.ಬೆಳ್ಳೂರು ಗ್ರಾ.ಪಂ.