ಪಣಜಿ: ಭಾರತದಲ್ಲಿ ಕಾನೂನುಬದ್ಧವಾಗಿ ಲೈಂಗಿಕ ಆಟಿಕೆಗಳ ಮಾರಾಟ ನಡೆಸುವ ದೇಶದ ಮೊದಲ ಮಳಿಗೆ ಕಾಮ ಗಿಜ್ಮೋಸ್‌ಗೆ ಗೋವಾದಲ್ಲಿ ಕಹಿ ಅನುಭವ ಎದುರಾಗಿದೆ.
ಪ್ರೇಮಿಗಳ ದಿನದಂದು ಜನಪ್ರಿಯ ಪ್ರವಾಸಿ ತಾಣವಾದ ಕಾಲನ್‌ಗಟ್‌ನಲ್ಲಿ ತೆರೆಯಲಾಗಿದ್ದ ಈ ಮಳಿಗೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಬಂದ್ ಮಾಡಿಸಿದೆ. ಯಾವುದೇ ವ್ಯಾಪಾರ ಪರವಾನಗಿ ಪಡೆಯದೆ ಮಳಿಗೆ ನಡೆಸುತ್ತಿದ್ದಾರೆ ಎಂಬ ದೂರಿನ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ದಿನೇಶ್ ಸಿಮೆಪುರಸ್ಕರ್ ಹೇಳಿದ್ದಾರೆ.
ಅಂತೆಯೇ, ಇಂತಹ ಆಟಿಕೆಗಳು, ವೆಲ್‌ನೆಸ್ ಕೇಂದ್ರ ಆರಂಭವಾಗಿರುವ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಈ ಸಂಬಂಧ ಹಲವಾರು ದೂರುಗಳು ತಮಗೆ ಬಂದಿವೆ. ತಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇಂತಹ ಮಳಿಗೆ ವಹಿವಾಟು ನಡೆಸಲು ಅವಕಾಶ ಕಲ್ಪಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಆದರೆ, ಲೈಂಗಿಕ ಆಟಿಕೆಗಳ ಮಾರಾಟದಲ್ಲಿ ಸ್ಪರ್ಧಿಗಳಾಗಿರು ಕಾಮ ಕಾರ್ಟ್, ಗಿಜ್ಮೋಸ್ವಾಲಾ ಎಂಬ ಎರಡು ಕಂಪನಿಗಳು ಜಂಟಿಯಾಗಿ ಕಾಮ ಗಿಜ್ಮೋಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿವೆ. ಗೋವಾದಲ್ಲಿ ನಡೆದ ಘಟನೆ ಕುರಿತು ಕಾಮ್‌ಕಾರ್ಟ್ ಸಿಇಓ ಗಣೇಶನ್, 'ನಾವು ವ್ಯಾಪಾರ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದೇವೆ.
ಪ್ರಸ್ತುತ ಪ್ರಕ್ರಿಯೆ ನಡೆಯುತ್ತಿದೆ. ಇನ್ನೂ ಕೆಲ ದಿನಗಳಲ್ಲಿ ವಿವಾದ ಕೊನೆಗೊಳ್ಳಲಿದೆ. ಆದರೆ ಸ್ಥಳೀಯ ಮುಖಂಡರಿಂದ ದಿನದಿಂದ ದಿನಕ್ಕೆ ಒತ್ತಡ ಹೆಚ್ಚುತ್ತಿದೆ. ಹೊರಗಿನವರು ನಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ ವಿವಾದ ಕೊನೆಗೊಳಿಸಿ ಸದ್ಯದಲ್ಲಿಯೇ ಮಳಿಗೆ ತೆರೆಯಲಿದ್ದೇವೆ ಎಂದು ಹೇಳಿದ್ದಾರೆ. ಮಳಿಗೆಯಿಂದ ಸಾಕಷ್ಟು ಪುರುಷರು ಹಾಗೂ ಮಹಿಳೆಯರು ಸೆಕ್ಸ್ ಆಟಿಕೆಗಳನ್ನು ಖರೀದಿಸಿ, ಅವುಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ನಾವು ಕಾನೂನುಬದ್ಧವಾಗಿ ಮುಂದುವರಿಯುತ್ತಿದ್ದೇವೆ. ಗೋವಾದಲ್ಲಿ ಶೀಘ್ರದಲ್ಲೇ ಮತ್ತೊಂದು ಮಳಿಗೆ ತೆರೆಯಲು ಯೋಜಿಸಿದ್ದೇವೆ ಎಂದು ತಿಳಿಸಿದ್ದಾರೆ.