ಲಂಡನ್: ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನೆಕಾ ಸಂಸ್ಥೆ ಸಂಶೋಧಿಸಿದ್ದ ಕೋವಿಡ್ ಲಸಿಕೆಯ ಬಳಕೆಗೆ ಜರ್ಮನಿ, ಫ್ರಾನ್ಸ್, ಇಟಲಿ ದೇಶಗಳು ನಿರ್ಬಂಧ ಹೇರಿವೆ.
ಈಗಾಗಲೇ ಕೋವಿಡ್ ಲಸಿಕೆ ಬಳಕೆಯಿಂದ ಗಂಭೀರ ಸ್ವರೂಪದ ಅಡ್ಡ ಪರಿಣಾಮಗಳಾಗುತ್ತಿವೆ ಎಂದು ಆರೋಪಿಸಿ 10 ದೇಶಗಳು ಈ ಲಸಿಕೆಯ ಬಳಕೆಯನ್ನು ನಿಷೇಧಿಸಿವೆ. ಇದೀಗ ಈ ಪಟ್ಟಿಗೆ ಜರ್ಮನಿ, ಫ್ರಾನ್ಸ್, ಇಟಲಿ ದೇಶಗಳು ಕೂಡ ಸೇರಿವೆ. ಇತ್ತೀಚೆಗಷ್ಟೇ ನೆದರ್ಲೆಂಡ್ ತಂಡ ಈ ಲಸಿಕೆ ಬಳಕೆ ಮೇಲೆ ನಿರ್ಬಂಧ ಹೇರಿತ್ತು.
ಜರ್ಮನಿ, ಫ್ರಾನ್ಸ್, ಇಟಲಿ ದೇಶಗಳಲ್ಲಿ ಈ ಕೋವಿ ಶೀಲ್ಡ್ ಲಸಿಕೆ ಪಡೆದವರಲ್ಲಿ ರಕ್ತ ತೀವ್ರ ಪ್ರಮಾಣದಲ್ಲಿ ಹೆಪ್ಪುಗಟ್ಟುವಿಕೆಯ ಪ್ರಕರಣಗಳು ವರದಿಯಾಗಿತ್ತು. ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಈ ಲಸಿಕೆಯನ್ನು ಈ ಮೂರು ದೇಶಗಳು ನಿರ್ಬಂಧ ಹೇರಿವೆ.
ಯೂರೋಪಿನ 10 ರಾಷ್ಟ್ರಗಳಲ್ಲಿ ಕೋವಿಶೀಲ್ಡ್ ನಿಷೇಧ:
ಈಗಾಗಲೇ ಯೂರೋಪಿನ 10 ದೇಶಗಳಲ್ಲಿ ಕೋವಿಡ್ ಲಸಿಕೆಯ ಬಳಕೆಗೆ ನಿಷೇಧ ಹೇರಲಾಗಿದೆ. ಪ್ರಮುಖವಾಗಿ ನಾರ್ವೆ, ಐಲೆಂಡ್, ಆಸ್ಟ್ರಿಯಾ, ಎಸ್ಟೋನಿಯಾ, ಲಿಥುವೇನಿಯಾ, ಡೆನ್ಮಾರ್ಕ್, ಬಲ್ಗೇರಿಯಾ, ಲಕ್ಸೆಂಬರ್ಗ್ ಮತ್ತು ಲಾಟ್ವಿಯಾದಲ್ಲಿ ಕೋವಿಡ್ ಬಳಕೆಗೆ ನಿಷೇಧ ಹೇರಲಾಗಿದೆ.
ಲಸಿಕೆಯಿಂದ ಅಡ್ಡ ಪರಿಣಾಮಗಳಿಲ್ಲ ಎಂದ ಆಸ್ಟ್ರಾಜೆನೆಕಾ ಸಂಸ್ಥೆ:
ವರದಿಗಳಲ್ಲಿರುವಂತೆ ಲಸಿಕೆಯಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ ಎಂದು ಆಸ್ಟ್ರಾಜೆನೆಕಾ ಸಂಸ್ಥೆ ಹೇಳಿಕೊಂಡಿದೆ. ಯೂರೋಪ್ ಮತ್ತು ಬ್ರಿಟನ್ ನಲ್ಲಿ ಸುಮಾರು 17 ಮಿಲಿಯನ್ ಮಂದಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ ರಕ್ತ ಹೆಪ್ಪುಗಟ್ಟುವಿಕೆ ಪ್ರಮಾಣ ತೀರಾ ಕಡಿಮೆ. ಸಂಸ್ಥೆ ಈ ಬಗ್ಗೆ ಗಂಭೀರ ಚಿಂತನೆಯಲ್ಲಿದ್ದು, ನಮ್ಮ ಸಂಸ್ಥೆಯ ತಜ್ಞರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದೆ.
ಪ್ರಸ್ತುತ ಭಾರತದಲ್ಲಿ ಈ ಲಸಿಕೆಯನ್ನು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿ ಮಾರಾಟ ಮಾಡುತ್ತಿದೆ.