ಮುಂಬೈ: ಮಹಾರಾಷ್ಟ್ರದಲ್ಲಿ ಆನ್‌ಲೈನ್ ಶಾಪಿಂಗ್ ಫ್ರಾಡ್ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ನಾಗರೀಕರು ಎಚ್ಚರಿಕೆಯಿಂದ ಇರುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ರಾಜ್ಯದ ಗೃಹ ಸಚಿವ ಅನಿಲ್ ದೇಶಮುಖ್ ಹೇಳಿದ್ದಾರೆ. ಈ ಬಗ್ಗೆ ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ನ ಸುಧೀರ್ ತಂಬೆ ಮತ್ತು ಇತರರು ಕೇಳಿದ ಸ್ಟಾರ್ಡ್ ಪ್ರಶ್ನೆಗೆ ಸಚಿವರು ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ.
2020ರ ವರ್ಷದಲ್ಲಿ ಇ-ಕಾಮರ್ಸ್ ಜಿ ವಹಿವಾಟಿನಲ್ಲಿ ವಂಚನೆಗೊಳಗಾದ ನಾಗರಿಕರಿಂದ ಬಂದ ದೂರುಗಳ ಮೇಲೆ ಪುಣೆಯಲ್ಲೇ 1,370 ದೂರುಗಳು ದಾಖಲಾಗಿವೆ. ಮಹಾರಾಷ್ಟ್ರದಾದ್ಯಂತ ಒಟ್ಟು 2,276 ಆನ್‌ಲೈನ್ ಶಾಪಿಂಗ್ ವಂಚನೆ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ ಎಂದು ದೇಶಮುಖ್ ತಿಳಿಸಿದ್ದಾರೆ.
ರಾಜ್ಯದ ಗೃಹ ಇಲಾಖೆ 'ಮಹಾರಾಷ್ಟ್ರ ಸೈಬರ್ ಕಛೇರಿ'ಯ ಮೂಲಕ ಆನ್‌ಲೈನ್ ವಹಿವಾಟು ನಡೆಸುವಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಿ, ವಂಚನೆಯ ನಿದರ್ಶನಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ, ಮುಖ್ಯವಾಹಿನಿಯ ಪ್ರೆಸ್ ಮತ್ತು ತನ್ನದೇ ಆದ ವೆಬ್‌ಸೈಟ್‌ಗಳ ಮೂಲಕ ಜಾಗೃತಿ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ದೇಶಮುಖ್ ಹೇಳಿದ್ದಾರೆ.
ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ 46 ಸೈಬರ್ ಲ್ಯಾಬ್‌ಗಳನ್ನು ಗೃಹ ಇಲಾಖೆ ಸ್ಥಾಪಿಸಿದ್ದು, ಈ ಪೈಕಿ 43 ಕ್ಕೆ ಪೊಲೀಸ್ ಠಾಣೆಯ ಸ್ಥಾನಮಾನ ನೀಡಲಾಗಿದೆ. ಈ ಸೈಬರ್ ಲ್ಯಾಬ್/ಸೈಬರ್ ಪೊಲೀಸ್ ಠಾಣೆಗಳಿಗೆ ಆನ್‌ಲೈನ್ ವಂಚನೆಯನ್ನು ಎದುರಿಸಲು ಅತ್ಯಾಧುನಿಕ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಪರಿಕರಗಳನ್ನು ಒದಗಿಸಲಾಗಿದೆ. ಅಧಿಕಾರಿಗಳಿಗೆ ಸೈಬರ್ ಅಪರಾಧ ಪ್ರಕರಣಗಳನ್ನು ಭೇದಿಸುವ ತಂತ್ರಗಳಲ್ಲಿ ವಿಶೇಷ ತರಬೇತಿ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.