ಕಾಸರಗೋಡು: ಮಂಗಳೂರು-ಚೆನ್ನೈ ವೆಸ್ಟ್‍ಕೋಸ್ಟ್ ಎಕ್ಸ್‍ಪ್ರೆಸ್ ರೈಲಿಗೆ ನೀಲೇಶ್ವರದಲ್ಲಿ ನಿಲುಗಡೆ ರದ್ದುಗೊಳಿಸಲು ಮುಂದಾಗಿರುವ ಇಲಾಖೆ ಕ್ರಮಕ್ಕೆ ರೈಲ್ವೆ ಬಳಕೆದಾರರ ಸಮಿತಿ ಹಾಗೂ ನೀಲೇಶ್ವರ ಅಭಿವೃದ್ಧಿ ಸಮಿತಿ ರಂಗಕ್ಕಿಳಿದಿದೆ. ನೀಲೇಶ್ವರದಿಂದ ಚೆನ್ನೈಗೆ ಹಲವಾರು ಮಂದಿ ಪ್ರಯಾಣಿಸುತ್ತಿದ್ದು, ರೈಲು ನಿಲುಗಡೆ ರದ್ದುಗೊಳಿಸಿರುವುದರಿಂದ ಇಲ್ಲಿನ ಪ್ರಯಾಣಿಕರು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ನಿಲುಗಡೆಗೊಳಿಸಿರುವ ರೈಲು ಸಂಚಾರ ಏ. 8ರಂದು ಮಂಗಳೂರಿನಿಂದ ಹಾಗೂ 9ರಂದು ಚೆನ್ನೈನಿಂದ ಪುನರಾರಂಭಗೊಳ್ಳಲಿದ್ದು, ಈ ಸಂದರ್ಭ ನೀಲೇಶ್ವರ ನಿಲ್ದಾಣದಲ್ಲಿ ನಿಲುಗಡೆ ಸ್ಥಗಿತಗೊಳಿಸುವ ಬಗ್ಗೆ ಇಲಾಖೆ ಸೂಚನೆ ನೀಡಿರುವುದರಿಂದ ಜನತೆ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ನೀಲೇಶ್ವರದಲ್ಲಿ ರೈಲಿಗೆ ಈ ಹಿಂದಿನಂತೆ ನಿಲುಗಡೆ ಕಲ್ಪಿಸುವ ಮೂಲಕ ಈ ಪ್ರದೇಶದ ಪ್ರಯಾಣಿಕರಿಗೆ ನ್ಯಾಯ ಒದಗಿಸಿಕೊಡುವಂತೆ ನೀಲೇಶ್ವರ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.