ಹೈದರಾಬಾದ್: ರಷ್ಯಾ ತಯಾರಿಸಿರುವ ಸ್ಪುಟ್ನಿಕ್-ಲಸಿಕೆ ಭಾರತದಲ್ಲಿ ಬಳಸಲು ಕೆಲ ವಾರಗಳಲ್ಲಿ ಸರ್ಕಾರದಿಂದ ಅನುಮತಿ ಲಭಿಸುವ ಸಾಧ್ಯತೆಯಿದೆ ಎಂದು ಡಾಕ್ಟರ್ ರೆಡ್ಡೀಸ್ ಲ್ಯಾಬ್ಸ್‌ನ ಸಿಇಓ ದೀಪಕ್ ಸಪ್ರಾ ತಿಳಿಸಿದ್ದಾರೆ.
ಭಾರತದಲ್ಲಿ ಈ ಲಸಿಕೆಯನ್ನು ಪೂರೈಸಲು ರಷ್ಯಾ ಇನ್ವೆಸ್ಟ್ ಮೆಂಟ್ ಫಂಡ್ ( ಆರ್ ಡಿ ಐ ಎಫ್ ) ನೊಂದಿಗೆ ಡಾ. ರೆಡ್ಡೀಸ್ ಒಪ್ಪಂದ ಮಾಡಿಕೊಂಡಿದೆ. ಈ ಭಾಗವಾಗಿ ಎರಡು ಹಾಗೂ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಭಾರತದಲ್ಲಿ ನಡೆಸಲಾಯಿತು. ಅದರ ಮಧ್ಯಂತರ ಫಲಿತಾಂಶಗಳನ್ನು ಭಾರತದ ಔಷಧಿ ನಿಯಂತ್ರಣ ಸಂಸ್ಥೆಗೆ ಸಲ್ಲಿಸಿದ್ದಾರೆ.
ಸ್ಪುಟ್ನಿಕ್-ವಿ ಎರಡು ಡೋಸ್ ಗಳ ಲಸಿಕೆ ಎಂದು ದೀಪಕ್ ವಿವರಿಸಿದ್ದಾರೆ. ಮೊದಲ ಡೋಸ್ ನೀಡಿದ ನಂತರ 21 ನೇ ದಿನದಂದು ಎರಡನೇ ಡೋಸ್ ಪಡೆದುಕೊಳ್ಳಬೇಕು. 28 ರಿಂದ 42 ದಿನಗಳ ನಡುವೆ ಕೊರೊನಾ ವೈರಸ್ ವಿರುದ್ದ ಪರಿಣಾಮಕಾರಿ ರೋಗ ನಿರೋಧಕ ಶಕ್ತಿಯನ್ನು ಲಸಿಕೆ ಅಭಿವೃದ್ಧಿಪಡಿಸುತ್ತದೆ ಎಂದು ತಿಳಿಸಿದ್ದಾರೆ.
ಭಾರತ, ರಷ್ಯಾ ಹಾಗೂ ಯುಎಇ ಸೇರಿದಂತೆ ಕೆಲವು ದೇಶಗಳಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗಿದೆ. ಲಸಿಕೆ ಶೇ. 91.6 ಪರಿಣಾಮಕಾರಿಯಾಗಿದೆ ಎಂದು ವಿವರಿಸಿದ್ದಾರೆ. ಪ್ರಮುಖ ವೈದ್ಯಕೀಯ ನಿಯತಕಾಲಿಕೆ ಲ್ಯಾನ್ಸೆಟ್ ಪ್ರಯೋಗದ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.
ರಷ್ಯಾದಲ್ಲಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್-ವಿ ಲಸಿಕೆಯನ್ನು ಭಾರತದಲ್ಲಿ ಅನುಮೋದನೆ ಪಡೆಯಬೇಕಾದರೆ, ಲಸಿಕೆಗೆ ಸಂಬಂಧಿಸಿದ ಎರಡು ಹಾಗೂ ಮೂರನೇ ಹಂತದ ಪ್ರಯೋಗಗಳನ್ನು ಇಲ್ಲಿಯೂ ನಡೆಸಬೇಕಾಗುತ್ತದೆ. ಇದರ ಭಾಗವಾಗಿ ಡಾ.ರೆಡ್ಡೀಸ್ ಲ್ಯಾಬ್ಸ್ ಭಾರತದಲ್ಲಿ ಕ್ಲಿನಿಕಲ್ ಪ್ರಯೋಗ ನಡೆಸುತ್ತಿದೆ. ಪ್ರಯೋಗಗಳ ನಂತರ ಭಾರತದಲ್ಲಿ ಹತ್ತು ಕೋಟಿ ಲಸಿಕೆ ಡೋಸ್ ಗಳನ್ನು ಪೂರೈಸಲು ಒಪ್ಪಂದ ಮಾಡಿಕೊಂಡಿದೆ.