ತಿರುವನಂತಪುರಂ : ಮುಂದಿನ ತಿಂಗಳು ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆಯಲ್ಲಿ ವಯನಾಡು ಜಿಲ್ಲೆಯ ಮಾನಂತವಾಡಿ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದ್ದ 31 ವರ್ಷದ ಎಂಬಿಎ ಪದವೀಧರ ಮಣಿಕುಟ್ಟನ್ ಅವರು ಬಿಜೆಪಿಗೆ ಕೈಕೊಟ್ಟಿದ್ದಾರೆ. ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ರಾಜಕೀಯ ತ್ಯಜಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಭಾನುವಾರ ಸಂಜೆ ಬಿಜೆಪಿ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿತ್ತು. ಪರಿಶಿಷ್ಟ ಪಂಗಡದವರಿಗಾಗಿ ಮೀಸಲಿರುವ ಮಾನಂತವಾಡಿ ವಿಧಾನಸಭೆ ಕ್ಷೇತ್ರದಲ್ಲಿ ಪಾಣಿಯಾ ಸಮುದಾಯದ ಮೊದಲ ಎಂಬಿಎ ಪದವೀಧರ ಎನಿಸಿಕೊಂಡಿರುವ ಮಣಿಕುಟ್ಟನ್ ಅವರನ್ನು ಕಣಕ್ಕಿಳಿಸುವುದಾಗಿ ಬಿಜೆಪಿ ತಿಳಿಸಿತ್ತು. ಆದರೆ ಬಿಜೆಪಿ ಅಸೆಗೆ ಅವರು ತಣ್ಣೀರೆರಚಿದ್ದಾರೆ.
ಬಿಜೆಪಿ ನೀಡಿದ್ದ ಆಹ್ವಾನವನ್ನು ತಾವು ಗೌರವಿಸುವುದಾಗಿ, ಆದರೆ ರಾಜಕಾರಣದ ಭಾಗವಾಗಿರಲು ತಾವು ಇಷ್ಟಪಡುವುದಿಲ್ಲ ಎಂದು ಮಣಿಕುಟ್ಟನ್ ಹೇಳಿದ್ದಾರೆ.
'ಕೇಂದ್ರ ನಾಯಕತ್ವವು ನನ್ನನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಪ್ರಕಟಿಸಿದೆ. ವಾಸ್ತವವಾಗಿ ನಾನು ಸಾಮಾನ್ಯ ಮನುಷ್ಯ. ನನಗೆ ಚುನಾವಣಾ ರಾಜಕಾರಣದಲ್ಲಿ ಭಾಗಿಯಾಗಲು ಇಷ್ಟವಿಲ್ಲ. ನನಗೆ ಕೆಲಸ ಮತ್ತು ಕುಟುಂಬ ಹೊಂದುವ ಆಸೆ ಇದೆ. ಹೀಗಾಗಿ ನಾನು ಸಂತೋಷದಿಂದಲೇ ಪಕ್ಷದ ಆಹ್ವಾನವನ್ನು ತಿರಸ್ಕರಿಸುತ್ತಿದ್ದೇನೆ' ಎಂದು ಮಣಿಕುಟ್ಟನ್ ತಿಳಿಸಿದ್ದಾರೆ.
'ಟಿವಿಯಲ್ಲಿ ನನ್ನ ಹೆಸರು ಪ್ರಕಟಿಸಿದಾಗ ಅಚ್ಚರಿ ಮತ್ತು ಉದ್ವೇಗ ಎರಡೂ ಆಯಿತು. ಪಾಣಿಯಾ ಸಮುದಾಯದಿಂದ ಒಬ್ಬರನ್ನು ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕಿಳಿಸಲು ಮುಂದಾಗಿದ್ದು ನನಗೆ ಖುಷಿ ನೀಡಿದೆ. ಆದರೆ ನಾನು ಅವರಿಗೆ ಫೋನ್‌ನಲ್ಲಿಯೇ ಹೇಳಿದ್ದೆ. ನಾನು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸುತ್ತಿಲ್ಲ' ಎಂದಿದ್ದಾರೆ.