ಕಾಸರಗೋಡು: ವಿಧಾನಸಭೆ ಚುನಾವಣೆ ಸಂಬಂಧ ಜಿಲ್ಲೆಯ ಗಡಿ ಪ್ರದೇಶಗಳ ಮೂಲಕ ಹಣ, ಆಯುಧ, ಮಾದಕಪದಾರ್ಥ ಇತ್ಯಾದಿ ಅಕ್ರಮ ಸಾಗಾಟ ತಡೆಯುವ ನಿಟ್ಟಿನಲ್ಲಿ ಅತೀವ ಜಾಗೃತಿ ವಹಿಸಬೇಕು ಎಂದು ಚುನಾವಣೆ ಆಯೋಗ ನೇಮಿಸಿರುವ ನಿರೀಕ್ಷಕರಾದ ಎಂ.ಸತೀಶ್ ಕುಮಾರ್ ಮತ್ತು ಸಂಜಯ್ ಪೌಲ್ ಆದೇಶಿಸಿದರು.
ಕಾಸರಗೋಡು ಜಿಲ್ಲಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಅವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
ಆಮಿಷ ನೀಡಿ ಮತದಾತರನ್ನು ಸೆಳೆಯುವ ನಿಟ್ಟಿನಲ್ಲಿ ಹಣ ಇತ್ಯಾದಿಗಳ ಅಕ್ರಮ ಸಾಗಾಟ ನಡೆಸುವ ಸಾಧ್ಯತೆಗಳಿದ್ದು, ಗಡಿಪ್ರದೇಶಗಳಲ್ಲಿ ಪ್ರತ್ಯೇಕ ತಪಾಸಣೆ ನಡೆಸಬೇಕು. ಈ ಬಗ್ಗೆ ಯಾವುದೇ ಮಾಹಿತಿಗಳಿದ್ದಲ್ಲಿ ಸಾರ್ವಜನಿಕರು ಸಿವಿಜಿಲ್ ಆಪ್ ಮೂಲಕ ದೂರು ಸಲ್ಲಿಸಬಹುದು. ಚುನಾವಣೆ ವೆಚ್ಚ ನಿರೀಕ್ಷಕರಿಗೆ ದೂರವಾಣಿ ಮೂಲಕ ಕರೆ ಮಾಡಿ ದೂರು ಸಲ್ಲಿಸಬಹುದು.
ಮಂಜೇಶ್ವರ, ಕಾಸರಗೋಡು ವಿಧಾನಸಭೆ ಕ್ಷೇತ್ರಗಳ ಹೊಣೆಯಿರುವ ಚುನಾವಣೆ ವೆಚ್ಚ ನಿರೀಕ್ಷಕ: ಸಂಜಯ್ ಪೌಲ್ -6238153313.
ತ್ರಿಕರಿಪುರ, ಕಾಞಂಗಾಡ್, ಉದುಮಾ ವಿಧಾನಸಭೆ ಕ್ಷೇತ್ರಗಳ ಹೊಣೆಯಿರುವ ಚುನಾವಣೆ ವೆಚ್ಚ ನಿರೀಕ್ಷಕ: ಎಂ.ಸತೀಶ್ ಕುಮಾರ್-7012993008.
ಹಿಂದಿನ ಕಾಲಗಳಿಗೆ ಹೋಲಿಸಿ ಯಾವುದಾದರೂ ಪ್ರದೇಶಗಳಲ್ಲಿ ಹೆಚ್ಚುವರಿ ಹಣ ಹರಿದುಬರುತ್ತಿದೆ ಎಂಬ ತಪಾಸಣೆ ನಡೆಸಬೇಕು. ಮತದಾತರಿಗೆ ಆಮಿಷ ನೀಡುವ ಮೂಲಕ ಸುಧಾರಿತ ಚುನಾವಣೆ ಪ್ರಕ್ರಿಯೆಗೆ ತಡೆಮಾಡುವ ಯತ್ನವನ್ನು ಅನುಮತಿ ನೀಡಕೂಡದು ಎಂದು ನಿರೀಕ್ಷಕರು ನುಡಿದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಚುನಾವಣೆ ಸಂಬಂಧ ಜಿಲ್ಲೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ರಿಟನಿರ್ಂಗ್ ಅಧಿಕಾರಿಗಳಾದ ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ವಲಯ ಕಂದಾಯಾಧಿಕಾರಿ ಪಿ.ಷಿಬು, ಸಹಾಯಕ ಜಿಲ್ಲಾಧಿಕಾರಿ ಗಳಾದ ಜಯಜೋಸ್ ರಾಜ್, ಷಾಜಿ ಎಂ.ಕೆ., ಸಿ.ರೋಷ್, ಪಿ.ಜಾನ್, ಖರ್ಚುವೆಚ್ಚ ನೋಡೆಲ್ ಅಧಿಕಾರಿ ಕೆ.ಸತೀಶನ್, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಸೈಮನ್ ಫೆನಾರ್ಂಡಿಸ್, ಸಹಾಯಕ ಖರ್ಚುವೆಚ್ಚ ಅಧಿಕಾರಿಗಳು, ಅಬಕಾರಿ, ಆದಾಯ ತೆರಿಗೆ, ಕೇಂದ್ರ ಅಬಕಾರಿ, ಕಸ್ಟಂಸ್, ಜಿ.ಎಸ್.ಟಿ. ಮೊದಲಾದ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.