ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೋರ್ವ ಉಗ್ರನನ್ನು ಎನ್ಕೌಂಟರ್ ನಲ್ಲಿ ಹೊಡೆದುರುಳಿಸಲಾಗಿದೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್ ನಲ್ಲಿ ಸತತ ಮೂರನೇ ದಿನವೂ ಸೇನಾ ಪಡೆಗಳು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಮತ್ತೋರ್ವ ಉಗ್ರನನ್ನು ಹೊಡೆದುರುಳಿಸಿದ್ದಾರೆ. ಶೋಪಿಯಾನ್ ಜಿಲ್ಲೆಯ ರಾವಲ್ ಪೋರಾದಲ್ಲಿ ಈ ಎನ್ಕೌಂಟರ್ ನಡೆದಿದ್ದು, ಗುಂಡಿನ ಕಾಳಗದಲ್ಲಿ ಜೈಷ್ ಇ ಮೊಹಮದ್ ಸಂಘಟನೆಯ ಪ್ರಮುಖ ಕಮಾಂಡರ್ ಸಜ್ಜದ್ ಅಫ್ಘಾನಿಯನ್ನು ಹೊಡೆದುರುಳಿಸಲಾಗಿದೆ.
ಈ ಪ್ರದೇಶದಲ್ಲಿ ಉಗ್ರರು ಅವಿತಿರುವ ಕುರಿತು ಮೂರು ದಿನಗಳ ಹಿಂದೆಯೇ ಸೇನಾಪಡೆಗಳು ಮಾಹಿತಿ ಕಲೆಹಾಕಿದ್ದವು. ಈ ಹಿನ್ನಲೆ ಶನಿವಾರ ಕಾರ್ಯಾಚರಣೆ ಆರಂಭವಾಗಿತ್ತು. ಇಂದು ಈ ಕಾರ್ಯಾಚರಣೆ ಮುಂದುವರೆದಿದ್ದು, ಇಂದು ಮತ್ತೋರ್ವ ಉಗ್ರಗಾಮಿಯನ್ನು ಹೊಡೆದುರುಳಿಸಲಾಗಿದೆ. ಅಂತೆಯೇ ಘಟನಾ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಭದ್ರತಾಪಡೆ ಸಿಬ್ಬಂದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದ್ದು, ಉಗ್ರರು ಪರಾರಿಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಇಂದು ಸಜ್ಜದ್ ಅಫ್ಘಾನಿಯನ್ನು ಹೊಡೆದುರುಳಿಸಿದ ಬಳಿಕ ಕಾರ್ಯಾಚರಣೆಯಲ್ಲಿ ಹತರಾದ ಉಗ್ರರ ಸಂಖ್ಯೆ 2ಕ್ಕೇರಿದೆ. ನಿನ್ನೆ ಅಂದರೆ ಭಾನುವಾರ ಮತ್ತೋರ್ವ ಲಷ್ಕರ್ ಉಗ್ರ ಜಹಂಗೀರ್ ಅಹ್ಮದ್ ನನ್ನು ಹೊಡೆದುರುಳಿಸಲಾಗಿತ್ತು. ಅಲ್ಲದೆ ಆತನ ದೇಹ ಪತ್ತೆಯಾದ ಸ್ಥಳದಿಂದ ಅಮೆರಿಕ ನಿರ್ಮಿತ ಎಂ4 ಕಾರ್ಬಿನ್ ರೈಫಲ್, 36 ಸುತ್ತು ಸಜೀವ ಬುಲೆಟ್ ಗಳನ್ನು ವಶಕ್ಕೆ ಪಡೆಯಲಾಗಿತ್ತು.