ತಿರುವನಂತಪುರಂ: 'ಮೆಟ್ರೊ ಮ್ಯಾನ್' ಎಂದು ಖ್ಯಾತಿಯಾಗಿರುವ ದೆಹಲಿ ಮೆಟ್ರೊ ಮಾಜಿ ಮುಖ್ಯಸ್ಥ ಇ ಶ್ರೀಧರನ್ ಅವರು ಬರುವ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಅವರ ಹುಟ್ಟೂರಾದ ಪಾಲಕ್ಕಾಡ್ನಿಂದಲೇ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಈ ವಿಷಯ ಪ್ರಕಟಿಸಿದ್ದಾರೆ. ಬಿಜೆಪಿ ಇಂದು ಕೇರಳ ವಿಧಾನಸಭೆಯ 116 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಏಪ್ರೀಲ್ 6 ರಂದು ಕೇರಳ ವಿಧಾನಸಭೆಗೆ ಚುನಾವಣೆ ಜರುಗಲಿದೆ.
ಇ ಶ್ರೀಧರನ್ ಅವರನ್ನು ಈಗಾಗಲೇ ಕೇರಳ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಣೆ ಮಾಡಿದೆ. ಅವರು ಕಳೆದ ತಿಂಗಳು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದರು. ಕೇರಳದ ಮಲ್ಲಪುರಂನಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಯಾತ್ರೆಯಲ್ಲಿ ಕೇಂದ್ರ ಸಚಿವ ಆರ್ ಕೆ ಸಿಂಗ್ ಅವರ ನೇತೃತ್ವದಲ್ಲಿ ಇ ಶ್ರೀಧರನ್ ಬಿಜೆಪಿ ಸೇರ್ಪಡೆಯಾಗಿದ್ದರು. ಈ ವೇಳೆ ಬೃಹತ್ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಮಾವೇಶಗೊಂಡಿದ್ದರು.
ಕೇರಳ ಚುನಾವಣೆಯಲ್ಲಿ ಶತಾಯ ಗತಾಯ ಅಧಿಕಾರ ಹಿಡಿಯಬೇಕು ಎಂಬ ತಯಾರಿಯಲ್ಲಿ ಬಿಜೆಪಿ ಇದೆ. ಹೀಗಾಗಿ ಬಿಜೆಪಿ ಹಲವರಿಗೆ ಗಾಳ ಹಾಕಿದೆ. ಶ್ರೀಧರನ್ ಅವರು, ತಾವು ಕೇರಳ ಮುಖ್ಯಮಂತ್ರಿಯಾಗಲು ಅರ್ಹ ಅಭ್ಯರ್ಥಿ ಎಂದು ಈಗಾಗಲೇ ಹೇಳಿಕೊಂಡಿದ್ದರು. 88ರ ವಯೋಮಾನದ ಶ್ರೀಧರನ್ ಅವರು ಮೂಲತಃ ಕೇರಳದ ಪಾಲಕ್ಕಾಡ್ ಜಿಲ್ಲೆಯವರು. ಭಾರತದ ದೆಹಲಿ ಮೆಟ್ರೋ ಸೇರಿದಂತೆ ಇತರ ನಗರಗಳ ಮೆಟ್ರೋ ಯೋಜನೆ ಹಾಗೂ ಮಹತ್ವದ ರೈಲು ಯೋಜನೆಗಳಲ್ಲಿ ಶ್ರೀಧರನ್ ಪಾತ್ರ ತುಂಬಾ ದೊಡ್ಡದಿದೆ. ಅದ್ಭುತ ಎಂಜಿನಿಯರ್ ಆಗಿರುವ ಅವರನ್ನು ಮೆಟ್ರೊ ಮ್ಯಾನ್ ಎಂದೇ ಕರೆಯಲಾಗುತ್ತಿದೆ.