ನವದೆಹಲಿ: ಕೊನೆಗೂ ಇಂಧನ ದರ ಇಳಿಕೆಯಾಗುವ ಮೂಲಕ ಗ್ರಾಹಕರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಸತತ ಒಂದು ವರ್ಷದಿಂದ ಏರಿಕೆಯಾಗುತ್ತಲೇ ಇದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಒಂದು ವರ್ಷ ನಂತರ ಇದೇ ಮೊದಲ ಬಾರಿಗೆ ಇಳಿಕೆಯಾಗಿದೆ.
ಬುಧವಾರ ಪೆಟ್ರೋಲ್ ದರ 18 ಪೈಸೆ ಮತ್ತು ಡೀಸೆಲ್ ದರ ಲೀಟರ್ ಗೆ 17 ಪೈಸೆ ಇಳಿಕೆಯಾಗಿದೆ. ಫೆಬ್ರವರಿ ತಿಂಗಳ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿದೆ ಎಂದು ವಿಶ್ಲೇಷಿಸಬಹುದು.
ಈ ಮೂಲಕ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಇಂದು 91 ರೂಪಾಯಿ 17 ಪೈಸೆಯಿಂದ 90 ರೂಪಾಯಿ 99 ಪೈಸೆಗೆ ಇಳಿಕೆಯಾಗಿದೆ. ಡೀಸೆಲ್ ಬೆಲೆ 81 ರೂಪಾಯಿ 47 ಪೈಸೆಯಿಂದ 81 ರೂಪಾಯಿ 30 ಪೈಸೆಗೆ ಇಳಿದಿದೆ. ದೇಶಾದ್ಯಂತ ಈ ಇಳಿಕೆ ದರ ಅನ್ವಯವಾಗುತ್ತಿದ್ದು, ಸ್ಥಳೀಯ ತೆರಿಗೆ ಪದ್ಧತಿಯ ಲೆಕ್ಕಾಚಾರದಿಂದ ರಾಜ್ಯದಿಂದ ರಾಜ್ಯಕ್ಕೆ ಇಂಧನ ದರ ವ್ಯತ್ಯಾಸವಿರುತ್ತದೆ.
ಕಳೆದ ಬಾರಿ ಪೆಟ್ರೋಲ್ ದರ ಇಳಿಕೆಯಾಗಿದ್ದು ಕಳೆದ ವರ್ಷ 2020 ಮಾರ್ಚ್ 16ರಂದು. ನಂತರ ಸತತ ಒಂದು ವರ್ಷದಲ್ಲಿ ಪೆಟ್ರೋಲ್ ಬೆಲೆ 21 ರೂಪಾಯಿ 58 ಪೈಸೆಯಷ್ಟು ಏರಿಕೆಯಾಗಿತ್ತು. ಇನ್ನು ಡೀಸೆಲ್ ಬೆಲೆ ಲೀಟರ್ ಗೆ 19 ರೂಪಾಯಿ 18 ಪೈಸೆಯಷ್ಟು ಒಂದು ವರ್ಷದಲ್ಲಿ ಏರಿಕೆಯಾಗಿತ್ತು.
ಕಳೆದ ತಿಂಗಳು ಹಲವು ರಾಜ್ಯಗಳಾದ ರಾಜಸ್ತಾನ, ಮಹಾರಾಷ್ಟ್ರ, ಮಧ್ಯ ಪ್ರದೇಶಗಳಲ್ಲಿ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿತ್ತು. ಮುಂದಿನ ತಿಂಗಳು ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳು ನಾಡು, ಕೇರಳ, ಪುದುಚೆರಿಗಳಲ್ಲಿ ಚುನಾವಣೆ ನಡೆಯುತ್ತಿದೆ. ಈ ಹೊತ್ತಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ.
ಮುಂಬೈಯಲ್ಲಿ ಇಂದು ಪೆಟ್ರೋಲ್ ಬೆಲೆ 97.57 ರೂಪಾಯಿಗಳಿಂದ 97.40 ರೂಪಾಯಿಗೆ ಕಡಿತಗೊಂಡಿದ್ದು, ಡೀಸೆಲ್ ದರ 88.60 ರೂಪಾಯಿಗಳಿಂದ 88.42 ರೂಪಾಯಿಗೆ ಇಳಿಸಲಾಗಿದೆ.
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಲೀಟರ್ ಗೆ 94 ರೂಪಾಯಿ 04 ಪೈಸೆಯಾಗಿದೆ. ಡೀಸೆಲ್ ದರ ಲೀಟರ್ ಗೆ 86 ರೂಪಾಯಿ 37 ಪೈಸೆಯಾಗಿದೆ.
ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೆಟ್ ಕಚ್ಚಾ ತೈಲ ಬೆಲೆ ನ್ಯೂಯಾರ್ಕ್ ನಲ್ಲಿ ಫೆಬ್ರವರಿ 5ರಿಂದ ಡಾಲರ್ 57.76 ಯುಎಸ್ ಡಾಲರ್ ಗೆ ಇಳಿದಿದೆ, ಫೆಬ್ರವರಿ 8ರ ನಂತರ ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 3.83 ಡಾಲರ್ ನಿಂದ 60.79 ಡಾಲರ್ ಗೆ ಇಳಿಕೆಯಾಗಿದೆ. ಇದೀಗ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಆರ್ಥಿಕ ಚೇತರಿಕೆಗೆ ಕಷ್ಟವಾಗಿದೆ.
ಇಂದು ಬೆಳಗಿನ ವಹಿವಾಟು ಆರಂಭದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆ ಇಳಿಕೆಯಾಗಿ ಪ್ರತಿ ಡಾಲರ್ ಗೆ ರೂಪಾಯಿ ಬೆಲೆ 72 ರೂಪಾಯಿ 53 ಪೈಸೆಯಷ್ಟಾಗಿದೆ.