ಭೋಪಾಲ್: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ತೀವ್ರ ಅನಾರೋಗ್ಯ ಕಾಡಿದ್ದು, ಶನಿವಾರ ವಿಮಾನದ ಮೂಲಕ ಮುಂಬೈಗೆ ಕರೆದೊಯ್ಯಲಾಗಿದೆ ಎಂದು ಅವರ ಸಹಾಯಕ ತಿಳಿಸಿದ್ದಾರೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಠಾಕೂರ್ ಅವರಿಗೆ ಉಸಿರಾಟದ ತೊಂದರೆ ಸೇರಿ ಕೆಲ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿದ್ದು, ಕೂಡಲೆ, ಅವರನ್ನು ನಿವಾಸದಿಂದ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು. ಅಲ್ಲಿಂದ ವಿಮಾನದ ಮೂಲಕ ಮುಂಬೈಗೆ ಕೊಂಡೊಯ್ದಿದ್ದು, ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಹಾಯಕ ಸಂದೀಪ್ ಶ್ರೀವಾಸ್ತವ ಪಿಟಿಐಗೆ ತಿಳಿಸಿದ್ದಾರೆ.
2008 ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಅನಾರೋಗ್ಯ ಮತ್ತು ಭದ್ರತಾ ವಿಷಯಗಳ ಆಧಾರದ ಮೇಲೆ ಮುಂಬೈನ ನ್ಯಾಯಾಲಯ ಇತ್ತೀಚೆಗೆ ದೈನಂದಿನ ಹಾಜರಾತಿಯಿಂದ ವಿನಾಯಿತಿ ನೀಡಿತ್ತು.
ಇತ್ತೀಚೆಗೆ ಸಂಸತ್ ಅಧಿವೇಶನ ಮುಕ್ತಾಯಗೊಂಡ ಬಳಿಕ ಭೋಪಾಲ್‌ಗೆ ಮರಳಿದ್ದ ಠಾಕೂರ್, ಮತ್ತೆ ಆರೋಗ್ಯ ಸಮಸ್ಯೆ ಕಾಡಿದ್ದರಿಂದ ಮಾರ್ಚ್ 1 ರಂದು ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಗೆ ದಾಖಲಾಗಿದ್ದರು ಎಂದು ಶ್ರೀವಾಸ್ತವ ತಿಳಿಸಿದ್ದಾರೆ.
ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ವಕೀಲ ಜೆ ಪಿ ಮಿಶ್ರಾ ಮುಂಬೈನಲ್ಲಿ ಪಿಟಿಐಗೆ ಖಚಿತಪಡಿಸಿದ್ದಾರೆ.