ಬದಿಯಡ್ಕ: ಕಾಸರಗೋಡು ಜೋಗಿ ಸಮಾಜ ಸುಧಾರಕ ಸಂಘದ ವಾರ್ಷಿಕ ಮಹಾಸಭೆ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಇತ್ತೀಚೆಗೆ ಜರಗಿತು. ಸಂಘದ ಅಧ್ಯಕ್ಷ ಮುರಹರಿ ವಿ. ಜಿ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಜನಾರ್ದನ ಮಾಸ್ತರ್ ಮುಂಡಿತ್ತಡ್ಕ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮುಸ್ಸಂಜೆ ಹೊತ್ತಿನಲ್ಲಿರುವ ಹಿರಿಯರ ಮಾರ್ಗದರ್ಶನದೊಂದಿಗೆ ಮುಂಜಾನೆಯ ನವಿರಾದ ಬಿಸಿಲಿನಲ್ಲಿರುವ ಯುವ ಸಮೂಹ ಸಂಘಟನೆಯನ್ನು ಉತ್ತಮವಾಗಿ ಬೆಳೆಸಬೇಕು. ಸಮಾಜ ಬಾಂಧವರು ಒಗ್ಗಟ್ಟು ಹಾಗೂ ಸಮಾಜ ಮುಖಿಯಾದ ಕಾರ್ಯಕ್ರಮಗಳನ್ನು ಆಯೋಜಿಸಿ ಇತರರಿಗೆ ಮಾದರಿಯಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳುರು ಜೋಗಿ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ ಮಾತನಾಡಿದರು. ಪುತ್ತೂರು ನಾಥ ಪಂಥೀಯ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಮೋನಪ್ಪ ಪುರುಷ, ವಿಟ್ಲ ಜೋಗಿ ಸಂಘ ಸುಧಾರಕ ಸಂಘದ ಅಧ್ಯಕ್ಷ ನವನಾಥ್ ವಿಟ್ಲ, ಜೋಡುಕಲ್ಲು ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಜಯಂತ್ ಜೋಗಿ, ಸಹಕಾರಿ ಇಲಾಖೆಯ ನಿವೃತ್ತ ಅಸಿಸ್ಟೆಂಟ್ ರಿಜಿಸ್ಟ್ರಾರ್ ಐತ್ತಪ್ಪ ಮವ್ವಾರು, ನಿವೃತ್ತ ಮುಖ್ಯೋಪಾಧ್ಯಾಯ ಭಾಸ್ಕರ ಬಿ ಎಸ್, ನಿವೃತ್ತ ಗ್ರಾಮಾಧಿಕಾರಿ ಕೆ. ಗೋಪಾಲ ಮಂಜೇಶ್ವರ, ಸತೀಶ್ ಜೋಗಿ ಮುಡಿಪು ಮಂಗಳೂರು ನಾಥ ಪಂಥೀಯ ಜೋಗಿ ಸುಧಾರಕ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಜೋಗಿ ಉಪಸ್ಥಿತರಿದ್ದು ಮಾತನಾಡಿದರು.
ಮಂಗಳೂರು ಕದ್ರಿ ಮಠದ ಪ್ರಧಾನ ಅರ್ಚಕ ಉಮೇಶ್ ನಾಥ್ ಕದ್ರಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿಯಲ್ಲಿ ಉನ್ನತ ಸಾಧನೆಗೈದು ಅಧಿಕ ಅಂಕ ಗಳಿಸಿದ 5 ಮಂದಿ ವಿದ್ಯಾಥಿಗಳಿಗೆ, ಪಿಯುಸಿಯಲ್ಲಿ ಉತ್ತೀರ್ಣರಾದ ಮೂರುಮಂದಿ ವಿದ್ಯಾರ್ಥಿಗಳಿಗೆ ಹಾಗೂ ಭರತನಾಟ್ಯದಲ್ಲಿ ವಿದ್ವತ್ ಪೂರ್ಣಗೊಳಿಸಿದ ವಿದುಷಿ ಕು ಹರ್ಷಿತ ಯನ್ ಬದಿಯಡ್ಕ, ಕಲಾಪ್ರತಿಭೆ ಮನುಶ್ರೀ ಜೋಡುಕಲ್ಲು, ರಾಜ್ಯ ಮಟ್ಟದ ಕವಿತಾ ರಚನೆ ವಿಜೇತೆ ಅಮೃತಾ ಯು ಆರ್ ಎಡನೀರು ಇವರನ್ನು ನಗದು ಪುರಸ್ಕಾರ ಮತ್ತು ಸ್ಮರಣಿಕೆ ನೀಡಿ ಶಾಲು ಹೊದೆಸಿ ಅಭಿನಂದಿಸಲಾಯಿತು. ಸಂಘದ ಜೊತೆಕಾರ್ಯದರ್ಶಿ ಮಹೇಶ್ ಪುಣಿಯೂರು ಸ್ವಾಗತಿಸಿ, ರಮೇಶ್ ಬೇಳ ವಂದಿಸಿದರು. ರಾಜೇಶ್ ಮಾಸ್ತರ್ ಚಂಬಲ್ತಿಮಾರ್ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಶ್ರೀ ಕಾಲಭೈರವೇಶ್ವರ ಮಹಾಪೂಜೆ ಜರಗಿತು. ಅಪರಾಹ್ನ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.