ಕೋವಿಡ್ ಕಲಿಸಿದ ಪಾಠಗಳು ಅನೇಕ. ಎಷ್ಟೋ ಸರ್ಕಾರಿ ಸೇವೆಗಳನ್ನು ಅಗ್ಗದ ಪ್ರಚಾರತಂತ್ರ ಎಂದು ಸುಶಿಕ್ಷಿತ ಮಧ್ಯಮ ವರ್ಗದ ಜನ ಅಂದುಕೊಳ್ಳುತ್ತಿದ್ದವರು ಈಗ ವರಸೆ ಬದಲಾಯಿಸುವಂತಾಯಿತು. ದಕ್ಷ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ, ಮಧ್ಯಾಹ್ನದ ಬಿಸಿಯೂಟ, ಅಶಕ್ತರಿಗೆ ನೀಡುವ ಪಿಂಚಣಿ, ಕಲಾವಿದರಿಗೆ ಸಿಗುವ ಮಾಸಾಶನ ಎಲ್ಲವೂ ಎಷ್ಟು ಮುಖ್ಯ ಎಂಬುದನ್ನು ನಮಗದು ಕಲಿಸಿತು. ಫ್ಲೈ ಓವರ್‌ಗಳು, ಬುಲೆಟ್ ರೈಲು, ಅತ್ಯಾಧುನಿಕ ವಿಮಾನ ನಿಲ್ದಾಣ ಎಲ್ಲವೂ ಬೇಕು. ಆದರೆ, ಸುಸಜ್ಜಿತ ಮತ್ತು ವೃತ್ತಿಪರ ಸರ್ಕಾರಿ ಆಸ್ಪತ್ರೆಗಳನ್ನು ಕಟ್ಟುವ ಮೊದಲಲ್ಲ ಎಂಬುದು ಮನದಟ್ಟಾಯಿತು.
ಹಾಗೆಯೇ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಆದರೆ ಹೊಸ ಕಾಲದ ಅವಶ್ಯಕತೆಗೆ ಹೊಂದಿಕೊಳ್ಳಲು ಶಾಲೆಗಳು ಸಜ್ಜಾಗಿವೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಕಲಿಕೆಯ ಪರಿಸರವು ಮಗುಕೇಂದ್ರಿತವಾಗಬೇಕೆಂಬ ಮಾತನ್ನು ಮತ್ತೆ ಮತ್ತೆ ಆಡಿದ್ದರಿಂದ ಕ್ಲೀಷೆಯಾಯಿತೇ ವಿನಾ ತರಗತಿ ಕೋಣೆಯ ಸಂಸ್ಕೃತಿಯಾಗಲಿಲ್ಲ. ಚಮಚದಲ್ಲಿ ತಿನ್ನಿಸುವ ಶಿಕ್ಷಣ ಪದ್ಧತಿಯು ಮಗುವಿನ ಯೋಚನಾಶಕ್ತಿಯನ್ನು ಕುಂದಿಸುತ್ತದೆ. ಸ್ವಕಲಿಕೆಗೆ ಅವಕಾಶಗಳು ಕಡಿಮೆಯಾಗುತ್ತಾ ಬಾಯಿಪಾಠವೇ ಕಲಿಕೆ ಎಂಬ ತಪ್ಪು ಗ್ರಹಿಕೆಯನ್ನು ಆಧರಿಸಿದ ಮೌಲ್ಯಮಾಪನ ಪದ್ಧತಿಯು ಮಕ್ಕಳ ಬದುಕನ್ನು ಸೊರಗಿಸುತ್ತಿದೆ. ಈ ಜಗತ್ತನ್ನು ಮಗು ಸ್ವತಃ ಪರಿಶೋಧಿಸಬಲ್ಲದು ಎಂಬುದನ್ನು ದೊಡ್ಡವರ ಪ್ರಪಂಚವು ಅರ್ಥಮಾಡಿಕೊಳ್ಳಲು ಹೆಣಗುತ್ತಿದೆ.
2005ರ ಪಠ್ಯಕ್ರಮ ನೆಲೆಗಟ್ಟು ತನ್ನ ಮಾರ್ಗದರ್ಶಿ ಸೂತ್ರಗಳಲ್ಲಿ ಹೇಳಿರುವಂತೆ, ಕಲಿಕೆಯು ತರಗತಿ ಕೋಣೆ ಯನ್ನು ಮಾತ್ರವಲ್ಲದೆ ಎಲ್ಲ ಭೌತಿಕ ಸೀಮೆಗಳನ್ನು ಉಲ್ಲಂಘಿಸಬೇಕು. ಮಗುವು ತನ್ನದೇ ಜ್ಞಾನದ ನಿರ್ಮಾತೃವಾಗಬೇಕು. ಕಲಿಕೆಯು ಪಠ್ಯಪುಸ್ತಗಳಾಚೆ ವಿಸ್ತರಿಸಿ, ಬದುಕಾಗಬೇಕು.
ಮೌಲ್ಯಮಾಪನವು ಕಲಿಕೆಯ ಭಾಗವಾಗಬೇಕೇ ವಿನಾ ಕಲಿಕೆಯಿಂದ ದೂರ ನಿಂತು ಮಗುವನ್ನು ಹೆದರಿ ಸಬಾರದು. ಆದರೆ, ಕಳೆದ ಹದಿನೈದು ವರ್ಷಗಳಲ್ಲಿ ತರಗತಿ ಕೋಣೆಯ ವ್ಯವಹಾರವನ್ನು ಬದಲಿಸಲು ಮಾಡಿದ ಯಾವ ಪ್ರಯತ್ನವೂ ಫಲ ನೀಡಲಿಲ್ಲ. ಪರೀಕ್ಷೆಗಳ ಧಾವಂತದಲ್ಲಿ ಬದಲಾವಣೆಗೆ ಸಮಯವೂ ಕೂಡಿ ಬಂದಿರಲಿಲ್ಲ.
ಕೋವಿಡ್-19, ಒಂದು ಹೊಸ ಅವಕಾಶ ವನ್ನು ತೆರೆದು ತೋರಿಸಿದೆ. ಕಿಕ್ಕಿರಿದ ತರಗತಿಗಳಲ್ಲಿ ಕುಳಿತು ಶಿಕ್ಷಕರ ಪಾಠಗಳನ್ನು ಕೇಳುವ ಈ ಹಿಂದಿನ ಮಾದರಿಯು ಆರೋಗ್ಯದ ಕಾರಣದಿಂದಲೂ ಒಳ್ಳೆಯ ದಲ್ಲ ಎಂಬುದು ಈಗ ಅರ್ಥವಾಗುತ್ತಿದೆ. ಕಲಿಕೆಯು ಒಡನಾಟದಲ್ಲಿ ಸಂಭವಿಸುತ್ತದೆ. ಇದೊಂದು ಸಾಮಾ ಜಿಕ ಪ್ರಕ್ರಿಯೆ. ಕಂಪ್ಯೂಟರ್, ಮೊಬೈಲ್ ಫೋನ್‌ಗಳ ಮೂಲಕ ಮಾಹಿತಿಯನ್ನು ವರ್ಗಾಯಿಸಬಹುದೇ ಹೊರತು ಜ್ಞಾನವನ್ನಲ್ಲ. ಆದುದರಿಂದ, ಅನುಭವ ಕೇಂದ್ರಿತವಾದ ಹೊಸ ಕಲಿಕಾ ಪರಿಸರವನ್ನು ರೂಪಿಸುವ ಅನಿವಾರ್ಯ ಉಂಟಾಗಿದೆ.
ಚರ್ಚೆ, ಸಂವಾದ, ಸಮೀಕ್ಷೆ, ಮಾಡಿ-ಕಲಿ ಚಟುವಟಿಕೆಗಳು, ಪ್ರಯೋಗಗಳು, ನಾಟಕ, ಸಿನಿಮಾ, ಹಾಡು, ಹಬ್ಬ, ಬೇಸಾಯ ಎಲ್ಲವೂ ಕಲಿಕೆಯ ದಾರಿಗಳಾಗಿ ರೂಪುಗೊಳ್ಳಬೇಕು. ಹೀಗಾದಾಗ ದಿನವೂ ಶಾಲೆಗೆ ಬರುವುದು ಅನವಶ್ಯಕವೂ ಅರ್ಥ ಹೀನವೂ ಆಗಬಲ್ಲದು. ಮಕ್ಕಳಿಗೆ ಗುಣಮಟ್ಟದ ಪೌಷ್ಟಿ ಕಾಂಶಗಳು ದೊರೆಯುವುದು, ಬಾಲಕಾರ್ಮಿಕರಾಗದೆ ಇರುವುದು, ಬಾಲ್ಯವಿವಾಹದಂತಹ ಸಾಮಾಜಿಕ ಅನಿಷ್ಟಗಳಿಗೆ ಮಕ್ಕಳು ತುತ್ತಾಗದಂತೆ ಎಚ್ಚರಿಕೆ ವಹಿಸು ವುದು ಕೂಡ ಶಾಲೆಯ ಜವಾಬ್ದಾರಿಯಾಗಬೇಕು.
ಶಾಲೆಯು ಗೋಡೆಗಳನ್ನು ಮೀರಿ ವಿಸ್ತರಿಸಿ ಕೊಳ್ಳುವ ಜೊತೆಗೇ ಊರೇ ಶಾಲೆಯಾಗಿ ಮಾರ್ಪಾಡಾಗಬೇಕು. ತನ್ನೂರ ಜನರು, ತನ್ನೂರ ಸಂಸ್ಕೃತಿ, ತನ್ನೂರ ಭಾಷೆ, ತನ್ನೂರ ಜೀವವೈವಿಧ್ಯಗಳನ್ನು ಅರ್ಥ ಮಾಡಿಕೊಳ್ಳುತ್ತಾ ಮಗು ತನ್ನ ಪ್ರಜ್ಞೆಯನ್ನು ವಿಸ್ತರಿಸಿಕೊಳ್ಳಬೇಕು. ವಿಶ್ವ ಮಾನವನಾಗಬೇಕು. ಅನೌಪಚಾರಿಕವಾಗಿ ಗಳಿಸಿದ ಜ್ಞಾನವನ್ನು ನಿಖರಗೊಳಿಸಿಕೊಳ್ಳಲು ನಿರ್ದಿಷ್ಟ ಮತ್ತು ಶಿಸ್ತಿನ ಕಲಿಕೆಯೂ ಬೇಕು. ಅದನ್ನು ಗಳಿಸಿಕೊಳ್ಳಲು ತಜ್ಞ ವೃತ್ತಿನಿರತರ ಬೆಂಬಲದ ಅಗತ್ಯವಿದ್ದೇ ಇದೆ.
ಇದೆಲ್ಲ ಸಾಧ್ಯವಾಗಬೇಕಾದರೆ, ಅತ್ಯುತ್ತಮ ಗುಣ ಮಟ್ಟದ ಸ್ವ ಕಲಿಕೆಯ ಸಾಮಗ್ರಿಗಳನ್ನು ವಿನ್ಯಾಸಗೊಳಿಸಿ ಮಕ್ಕಳಿಗೆ ಪೂರೈಸಬೇಕಾಗುತ್ತದೆ. ನಿರಂತರವಾಗಿ ಮಕ್ಕಳಿಗೆ ಬೆಂಬಲ ನೀಡಬೇಕಾಗುತ್ತದೆ. ಬಹುಮಾಧ್ಯಮವನ್ನು ಇನ್ನಷ್ಟು ಪರಿಣಾಮಕಾರಿಯಾಗಿ
ಬಳಸಿಕೊಳ್ಳಬೇಕಾಗುತ್ತದೆ. ಕಲಿಕೆಗೆ ಹೊಂದಿ ಕೊಂಡಂತಹ ಮತ್ತು ಕಲಿಕೆಯ ಭಾಗವಾಗಿರುವ ಮೌಲ್ಯಮಾಪನ ವಿಧಾನಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕಾಗುತ್ತದೆ. ಕಲಿಯಲು ಕಲಿಸುವ ಶಾಲೆಯನ್ನು ರೂಪಿಸಲು ಇವೆಲ್ಲವೂ ಅವಶ್ಯಕ.
ಕಲಿಯಲು ಕಲಿಸುವುದೆಂದರೇನು? ಒಂದು ಉದಾಹರಣೆ ಇದನ್ನು ಸ್ಪಷ್ಟಪಡಿಸಬಹುದು- ಒಂದು ಪದದ ಅರ್ಥವನ್ನು ಮಕ್ಕಳಿಗೆ ತಿಳಿಸುವ ಬದಲು ಮಗುವಿಗೆ ನಿಘಂಟನ್ನು ನೀಡುವುದು ಮತ್ತು ಅವಶ್ಯಕವೆನಿಸಿದರೆ ನಿಘಂಟನ್ನು ಪರಾಮರ್ಶಿಸುವ ಕೌಶಲವನ್ನು ತಿಳಿಸುವುದು ಮಗುವಿಗೆ ಲಾಭದಾಯಕ. ಮುಂದಿನ ಬಾರಿ ಇನ್ನೊಂದು ಹೊಸ ಪದ ಎದುರಾದಾಗ ಮಗುವು ಅದರ ಅರ್ಥಕ್ಕಾಗಿ ಇನ್ನೊಬ್ಬರನ್ನು ಅವಲಂಬಿಸುವುದಿಲ್ಲ. ಸ್ವಕಲಿಕೆಯ ಕೌಶಲಗಳನ್ನು ಕಲಿಸುವುದರ ಜೊತೆಗೆ ಸ್ವ ಅಧ್ಯಯನ, ಪರಾಮರ್ಶನ ತಂತ್ರಗಳು, ಸಮೂಹ ಸಂವಹನಗಳನ್ನು ಮಗುವಿಗೆ ಕಲಿಸಬೇಕಿದೆ. ಮಗು ತನ್ನ ಜ್ಞಾನವನ್ನು ತಾನೇ ಕಟ್ಟಿಕೊಳ್ಳಲು ಅನುಕೂಲಕರವಾದ ಪರಿಸರವನ್ನು ವಿನ್ಯಾಸಗೊಳಿಸುವುದಷ್ಟೇ ನಮ್ಮ ಕೆಲಸ. ಶಿಕ್ಷಣವು ಮಗುವನ್ನು ಸ್ವಾವಲಂಬಿ ಯಾಗಿಸುವುದು ಇಂತಹ ವಿಧಾನಗಳಿಂದಲೇ.
ಇವೆಲ್ಲವೂ ಸವಾಲಿನ ಕೆಲಸಗಳೇ! ಆದರೆ, ಆರೋಗ್ಯವಂತ ಸಮಾಜವನ್ನು ರೂಪಿಸಲು ಇವು ಅವಶ್ಯಕ ಕೆಲಸಗಳೂ ಹೌದು.