ಪೆರ್ಲ: ಮಾನವನಿಗೆ ಭೂಮಿಯಲ್ಲಿ ಸ್ವಚ್ಛಂದವಾಗಿ ಬದುಕುವ, ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸುವ ಹಕ್ಕಿದೆಯೋ ಅಷ್ಟೇ ಸಮಾನ ಹಕ್ಕು ವನ್ಯ ಜೀವಿಗಳಿಗೂ ಇದೆ ಎಂಬುದನ್ನು ಮಾನವ ತಿಳಿಯಬೇಕಿದೆ ಎಂದು ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಉಪನ್ಯಾಸಕಿ ಅನುಷಾ ಸಿ. ಎಚ್. ಹೇಳಿದರು.
ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ವಿಶ್ವ ವನ್ಯ ಜೀವಿ ದಿನಾಚರಣೆಯಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಉಳಿದ ಜೀವಿಗಳಿಗೆ ಹೋಲಿಸುವಾಗ ಮಾನವ ಅತ್ಯಂತ ಅಧಿಕ ಬುದ್ಧಿ ಸಾಮಥ್ರ್ಯ ಹೊಂದಿದ ಜೀವಿ ಎಂದರೆ ತಪ್ಪಾಗಲಾರದು. ಆದರೆ ಇದೇ ಬುದ್ಧಿ ಶಕ್ತಿ ವನ್ಯ ಜೀವಿಗಳ ನಾಶಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಬುದ್ದಿ ಸಾಮಥ್ರ್ಯ ಅಧಿಕವಿರುವ ಜೀವಿ ಎಂಬ ನೆಲೆಯಲ್ಲಿ ತನ್ನ ಸಹಜೀವಿಗಳಾದ ವನ್ಯ ಜೀವಿಗಳ ಸಂರಕ್ಷಣೆ ಮಾನವನ ಹೊಣೆ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಕೃತಿಯನ್ನು, ವನ್ಯ ಜೀವಿಗಳನ್ನು, ಸಸ್ಯ ಸಂಪನ್ಮೂಲವನ್ನು ಸಂರಕ್ಷಿಸಲು ನಮ್ಮಿಂದ ಸಾಧ್ಯವಾಗದಿದ್ದರೂ ಕನಿಷ್ಠ ಪಕ್ಷ ನಮ್ಮ ಸ್ವಾರ್ಥ ಸಾಧನೆಗೆ ಇವುಗಳ ನಾಶಕ್ಕೆ ಕಾರಣಕರ್ತನಾಗದಿರಲು ಶ್ರಮಿಸಬೇಕು. ಅಭಿವೃದ್ಧಿ ಎಂಬುದು ಈ ಆಧುನಿಕ ಯುಗದ ಅತ್ಯಂತ ಅವಶ್ಯಕವಾದ, ಹೆಚ್ಚು ಒತ್ತು ನೀಡುತ್ತಿರುವ ವಿಷಯವಾಗಿದ್ದು, ಒಂದೆಡೆ ಅಭಿವೃದ್ಧಿಯೂ ಜೀವ ಸಂಕುಲದ ನಾಶಕ್ಕೂ ಕಾರಣವಾಗುತ್ತಿದೆ. ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕ್ಕೊಳ್ಳುವ ಮುನ್ನ ಅದರಿಂದ ಪರಿಸರ, ವನ್ಯ ಜೀವಿಗಳ ಮೇಲುಂಟಾಗುವ ಪರಿಣಾಮದ ಕುರಿತು ಕೂಲಂಕುಶವಾಗಿ ಚಿಂತಿಸಿ ಸುಸ್ಥಿರ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ. ಮಾತನಾಡಿ, ಮಾನವನ ಆಸೆ, ಆಕಾಂಕ್ಷೆಗಳು, ಸ್ವಾರ್ಥ ಅಧಿಕವಾಗುತ್ತಾ ಹೋದಂತೆ ಪ್ರಕೃತಿ ಕ್ಷೀಣಿಸುತ್ತಿದ್ದು, ಅದೆಷ್ಟೋ ವನ್ಯ ಜೀವಿ, ಸಸ್ಯ ಸಂಕುಲ ವಿನಾಶದ ಅಂಚಿಗೆ ತಲುಪಿದ್ದು, ಸರ್ಕಾರಗಳು, ಅರಣ್ಯ ಇಲಾಖೆ, ಸರ್ಕಾರೇತರ ಸಂಸ್ಥೆಗಳು ಜೀವ ಸಂಕುಲ ಇವುಗಳ ಸಂರಕ್ಷಣೆಯಲ್ಲಿ ಅಲ್ಪ ಸಫಲತೆ ಕಂಡಿದ್ದರೂ, ಪ್ರತಿಯೊರ್ವ ಮಾನವನೂ ಜಾಗೃತಗೊಂಡು ಈ ಚಟುವಟಿಕೆಗಳೊಂದಿಗೆ ಕೈಜೋಡಿಸಿದಲ್ಲಿ ಸಂಪೂರ್ಣ ಸಫಲತೆ ಸಾಧಿಸಲು ಸಾಧ್ಯ ಎಂದರು.
ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ದೀಕ್ಷಿತ್, ಹರ್ಷ, ಮಂಜುನಾಥ, ಅಂಕಿತಾ, ಅನುಶ್ರೀ ಉಪಸ್ಥಿತರಿದ್ದರು. ಪುನೀತ್ ಸ್ವಾಗತಿಸಿ, ಪ್ರೇಕ್ಷ ವಂದಿಸಿದರು. ಅಂಜನಾ ನಿರೂಪಿಸಿದರು.