ನವದೆಹಲಿ: ಮೂರನೇ ಹಂತದ ಕೊರೋನಾ ವ್ಯಾಕ್ಸಿನೇಷನ್ ಆರಂಭವಾಗಿದ್ದು, ಲಸಿಕೆಗಾಗಿ ನೋಂದಣಿ ಮತ್ತು ಅಪಾಯಿಂಟ್ಮೆಂಟ್ ಕಾಯ್ದಿರಿಸಲು ಕೋವಿನ್ ಆಯಪ್ ಬಳಸಬೇಡಿ. ಆಡಳಿತಗಾರರಿಗೆ ಮಾತ್ರ ಈ ಮೊಬೈಲ್ ಆಯಪ್ ಬಳಸಲು ಅವಕಾಶ ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಸ್ಪಷ್ಟಪಡಿಸಿದೆ.
ಫಲಾನುಭವಿಗಳು ಲಸಿಕೆಗಾಗಿ ನೋಂದಣಿ ಮಾಡಿಸಲು www.cowin.gov.in ವೆಬ್ ತಾಣವನ್ನು ಪ್ರವೇಶಿಸಬೇಕಾಗುತ್ತದೆ. ಅಲ್ಲಿ ಅರ್ಹ ಫಲಾನುಭವಿಗಳು ತಮ್ಮ ಮೊಬೈಲ್ ನಂಬರ್ ಹಾಗೂ ಆಧಾರ್ ನಂಬರ್ ಅನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಲಸಿಕೆಗಾಗಿ ಕೋವಿನ್ ಮೊಬೈಲ್ ಆಯಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂಬ ಸಂದೇಶಗಳು ಮಾಧ್ಯಮಗಳಲ್ಲಿ ಬಿತ್ತರವಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.
ವೆಬ್ ಸೈಟ್ನಲ್ಲಿ ನೀವು ನೋಂದಣಿ ಮಾಡಲು ಆಗದೇ ಹೋದರೆ ಸ್ವತಃ ಲಸಿಕಾ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಸಬಹುದು. ಅದಕ್ಕೆ ಆಧಾರ್ ಕಾರ್ಡ್ ಅಥವಾ ಬೇರೆ ನಿರ್ದಿಷ್ಟ ಗುರುತು ಚೀಟಿ ಅನ್ನು ತೆಗೆದುಕೊಂಡು ಹೋಗಬೇಕು. ಇನ್ನು, ಲಸಿಕೆ ಹಾಕಿಸಿಕೊಳ್ಳುವಾಗಲೂ ಆಧಾರ್ ಕಾರ್ಡ್ ಹಾಗೂ ಅಗತ್ಯಬಿದ್ದರೆ ವೈದ್ಯರ ಪ್ರಮಾಣಪತ್ರವನ್ನೂ ತೆಗೆದುಕೊಂಡು ಹೋಗಬೇಕು ಎಂದು ಕೇಂದ್ರ ಹೇಳಿದೆ.