ಕುಂಬಳೆ: ಮನೆ ಮತ್ತು ಜಮೀನನ್ನು ಪೂರ್ಣ ಮೊತ್ತವನ್ನು ಪಾವತಿಸಿ ಖರೀದಿಸಿ ವರ್ಷಗಳ ನಂತರ, ಈ ಹಿಂದಿನ ಜಮೀನಿನ ಮಾಲಿಕರು ಮಾಡಿದ್ದ ಬ್ಯಾಂಕ್ ಸಾಲದ ಹೆಸರಲ್ಲಿ ಬ್ಯಾಂಕ್ ಅಧಿಕೃತರು ಭೂಮಿ ಸ್ವಾಧೀನ ಬೆದರಿಕೆ ಒಡ್ಡುತ್ತಿರುವುದಾಗಿ ನತದೃಷ್ಟ ಕುಟುಂಬವೊಂದು ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಸುರಿಸಿದ ಘಟನೆ ನಡೆದಿದೆ.
ಇಂತಹ ಸಂಕಷ್ಟಕ್ಕೊಳಗಾಗಿರುವುದು ಸಾಮಾನ್ಯ ವ್ಯಕ್ತಿಯಾಗಿರದೆ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷೆ ಎಂಬುದು ಗಮನಾರ್ಹ. 2001-2005ರವರೆಗೆ ಕರ್ನಾಟಕದ ಸುಳ್ಯ ತಾಲೂಕಿನ ಪಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದ, ಪ್ರಸ್ತುತ ಕುಂಬಳೆ ನಿವಾಸಿಯಾಗಿರುವ ಪುಷ್ಪಾವತಿ ಅವರ ಸಂಕಷ್ಟತೆಯ ಸ್ಥಿತಿ. 2016ರ ಮೇ ಯಲ್ಲಿ ಆನಂದ ಅವರನ್ನು ವಿವಾಹವಾದ ಪುಷ್ಪಾವತಿ ಮತ್ತು ಅವರ ಕುಟುಂಬವು 10 ಸೆಂಟ್ಸ್ ನಿವೇಶನವೊಂದನ್ನು ಕುಂಬಳೆ ಶಿರಿಯ ಬತ್ತೇರಿಯಲ್ಲಿ ಚಂದ್ರಕಾಂತ್-ಸುಲೋಚನಾ ದಂಪತಿಗಳಿಂದ 16 ಸಾವಿರ ರೂ. ಮುಂಗಡ ಹಣ ನೀಡಿ ಖರೀದಿಸಿದ್ದರು. ಒಟ್ಟು 12 ಲಕ್ಷ ರೂ.ಗಳಿಗೆ ಖರೀದಿಸಿದ ನಿವೇಶನದ ಮೊದಲ ಕಂತು 6 ಲಕ್ಷ ರೂ.ಗಳನ್ನು ಅದೇ ವರ್ಷ ಪಾವತಿಸಿದ್ದರು. ಬಳಿಕ 2.45 ಲಕ್ಷ ರೂ.ಗಳನ್ನು ಪಾವತಿಸಿದರೆ ಸಾಕೆಂದೂ ಉಳಿದ ಹಣವನ್ನು ಬ್ಯಾಂಕ್ ಸಾಲಕ್ಕೆ ಮರುಪಾವತಿಸಬೇಕೆಂದು ತಿಳಿಸಿದರು. ಬಳಿಕ ಬ್ಯಾಂಕ್ ಸಾಲದ ಮೊತ್ತವನ್ನೂ ಸಕಾಲಕ್ಕೆ ಪಾವತಿಸುತ್ತಿದ್ದರು. ಪ್ರಸ್ತುತ ಬ್ಯಾಂಕ್ ಸಾಲ ಪೂರ್ತಿಯಾಗುವ ಹಂತದಲ್ಲಿದ್ದು ಇದೀಗ ಮನೆ ಸಹಿತವಾದ ನಿವೇಶನದ ಹಕ್ಕುಪತ್ರ ನೀಡಲು ಚಂದ್ರಕಾಂತ್ ಸಮ್ಮತಿಸುತ್ತಿಲ್ಲವೆಂದು ದೂರಲಾಗಿದೆ. ಜೊತೆಗೆ ಬ್ಯಾಂಕ್ ಅಧಿಕೃತರು ಇದೇ ನಿವೇಶನದ ಹೆಸರಲ್ಲಿ ಇನ್ನೊಂದು ಸಾಲವೂ ಬಾಕಿ ಇರುವುದಾಗಿ ತಿಳಿಸುತ್ತಿದ್ದು, ಅದನ್ನು ಪಾವತಿಸದಿದ್ದಲ್ಲಿ ಮನೆಯನ್ನು ಜಪ್ತಿ ಮಾಡುವ ಬೆದರಿಕೆ ಒಡ್ಡಿರುವುದಾಗಿ ಪುಷ್ಪಾವತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2017 ರ ಏಪ್ರಿಲ್‍ನಲ್ಲಿ 2.5 ಲಕ್ಷ ರೂ.ಗಳ ಸಾಲ ಸೇರಿದಂತೆ 12 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಪಾವತಿಸಿದ್ದರೂ ಸಹ ಭೂಮಿ ಮತ್ತು ಮನೆಯ ಹಕ್ಕುಪತ್ರ ನೀಡಲು ಚಂದ್ರಕಾಂತ್ ಸಿದ್ದರಾಗುತ್ತಿಲ್ಲ. ಜೊತೆಗೆ ಮನೆ ಮತ್ತು ನಿವೇಶನದ ಹೆಸರಲ್ಲಿ ಸುಲೋಚನ ಮತ್ತು ಚಂದ್ರಕಾಂತ್ ದಂಪತಿಗಳ ಹೆಸರಲ್ಲಿ ಎರಡು ಸಾಲಗಳಿವೆ ಮತ್ತು ಅವುಗಳನ್ನು ಹೇಳದೆ ವಂಚಿಸಲಾಗಿದೆ ಎಂದು ಪುಷ್ಪಾವತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಾಲವನ್ನು ಪಾವತಿಸದಿದ್ದಕ್ಕಾಗಿ ಬ್ಯಾಂಕ್ ನೋಟಿಸ್ ನೀಡಿದೆ.
ಪುಷ್ಪಾವತಿ ಮತ್ತು ಕುಟುಂಬ. ಈ ಬಗ್ಗೆ ಕೇಳಿದಾಗ ಏನೂ ಮಾಡಲು ಸಾಧ್ಯವಿಲ್ಲ ಎಂದು ಚಂದ್ರಕಾಂತ್ ಹೇಳಿದ್ದಾರೆ. ಯಾವುದೇ ಸಮಯದಲ್ಲಿ ಮನೆ ಮುಟ್ಟುಗೋಲು ಹಾಕಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿರುವರು. ಸ್ವತ್ತುಮರುಸ್ವಾಧೀನ ಬೆದರಿಕೆಯ ಹಿನ್ನೆಲೆಯಲ್ಲಿ ಏನು ಮಾಡಬೇಕೆಂದು ಪುಷ್ಪಾವತಿ ಮತ್ತು ಅವರ ಕುಟುಂಬ ಈಗ ತೀವ್ರ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಪುಷ್ಪಾವತಿ ಅವರು ಮಂಜೇಶ್ವರ ಮತ್ತು ಜಿಲ್ಲೆಯ ಪ್ರಮುಖ ಬಿಜೆಪಿ ಮುಖಂಡರಿಗೆ ಪದೇ ಪದೇ ಮಾಹಿತಿ ನೀಡುತ್ತಿದ್ದರೂ, ಅವರ ಸ್ಥಿತಿಯನ್ನು ಯಾರೂ ಕೇಳಲು ಸಿದ್ಧರಾಗುತ್ತಿಲ್ಲ ಎಂದು ಹೇಳಿದರು. ಬಿಜೆಪಿಯಲ್ಲಿ ಈ ಹಿಂದೆ ಕಾರ್ಯಕರ್ತೆಯಾಗಿ, ಪಂಚಾಯತಿ ಅಧ್ಯಕ್ಷೆಯಾಗಿದ್ದ ಪುಷ್ಪಾವತಿ, ಇಂತಹ ದುರದೃಷ್ಟ ಸ್ಥಿತಿಯನ್ನು ಪಕ್ಷದ ಪ್ರಮುಖರು ಬಗೆಗರಿಸಲು ಮುಂದಾಗದಿರುವುದು ಹೇಯಕರವಾಗಿದ್ದು ಸಾಮಾನ್ಯ ಜನರಿಗೆ ಹೇಗೆ ನ್ಯಾಯ ಸಿಗುತ್ತದೆ ಎಂದು ಕೇಳಿದರು. ಪುಷ್ಪಾವತಿ ಅವರು ಪಂಚಾಯತಿ ಅಧ್ಯಕ್ಷೆಯಾಗಿದ್ದ ಸಂದರ್ಭ ರಾಷ್ಟ್ರಪತಿಗಳಿಂದ ಸ್ವಚ್ಚ ಭಾರತ್ ಪ್ರಶಸ್ತಿ ಪಡೆದರು. ಮನೆ ಮತ್ತು ಭೂಮಿಯನ್ನು ಆದಷ್ಟು ಬೇಗ ಲಿಖಿತವಾಗಿ ನೀಡದಿದ್ದಲ್ಲಿ ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯಲು ಹೆಚ್ಚಿನ ಪ್ರಯತ್ನ ಮಾಡುತ್ತೇವೆ ಎಂದು ಪುಷ್ಪಾವತಿ ಮತ್ತು ಅವರ ಪತಿ ಆನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.