HEALTH TIPS

ಪಡಿತರ ಸೌಲಭ್ಯಕ್ಕೂ ಆಪತ್ತು?: ಪಡಿತರದಾರರ ಪ್ರಮಾಣ ಕುಗ್ಗಿಸಲು ನೀತಿ ಆಯೋಗ ಶಿಫಾರಸು

           ನವದೆಹಲಿ:   ಆಹಾರ ಭದ್ರತಾ ಕಾಯ್ದೆಯ ವ್ಯಾಪ್ತಿಗೆ ಬರುವ ಗ್ರಾಮೀಣ ಮತ್ತು ನಗರ ಪ್ರದೇಶದ ಜನರ ಪ್ರಮಾಣವನ್ನು ಕಡಿತಗೊಳಿಸುವ ಮೂಲಕ ಸಬ್ಸಿಡಿಯಲ್ಲಿ ವಾರ್ಷಿಕ ಸುಮಾರು 47,229 ಕೋಟಿ ರೂ. ಉಳಿತಾಯ ಮಾಡಬಹುದು ಎಂದು ಸರಕಾರದ ಚಿಂತಕರ ವೇದಿಕೆ ನೀತಿ ಆಯೋಗ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.


        ದೇಶದ ಒಟ್ಟು ಜನಸಂಖ್ಯೆಯ 67% ಜನರು ಈಗ ಆಹಾರ ಭದ್ರತಾ ಕಾಯ್ದೆಯ (ಪಡಿತರ ಆಹಾರ ಪೂರೈಕೆ ವ್ಯವಸ್ಥೆ) ವ್ಯಾಪ್ತಿಯಲ್ಲಿದ್ದಾರೆ. ಈ ಯೋಜನೆಯಡಿ ಈಗ ಗ್ರಾಮೀಣ ಪ್ರದೇಶದ 75% ಜನರು ಬರುತ್ತಿದ್ದು ಈ ಪ್ರಮಾಣವನ್ನು 60%ಕ್ಕೆ ಕಡಿಮೆಗೊಳಿಸಬೇಕು ಮತ್ತು ನಗರ ಪ್ರದೇಶದಲ್ಲಿ ಈಗ 50% ಜನರು ಕಾಯ್ದೆಯ ವ್ಯಾಪ್ತಿಯಲ್ಲಿದ್ದು ಇದನ್ನು 40%ಕ್ಕೆ ಇಳಿಸಬಹುದು ಎಂದು ನೀತಿ ಆಯೋಗದ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

     ಆಹಾರ ಭದ್ರತಾ ಕಾಯ್ದೆಯಡಿ, ದೇಶದ ಕಡುಬಡವರಿಗೆ ಇರುವ 'ಅಂತ್ಯೋದಯ ಅನ್ನಯೋಜನೆಯ' ಪ್ರತೀ ಕುಟುಂಬದವರಿಗೆ ತಿಂಗಳಿಗೆ 35 ಕಿ.ಗ್ರಾಂ ಆಹಾರ ಧಾನ್ಯ ಒದಗಿಸಲಾಗುತ್ತಿದೆ. 2021ರ ಫೆಬ್ರವರಿ 1ರ ದಿನಾಂಕದಂತೆ ಸುಮಾರು 9.01 ಕೋಟಿ ಜನತೆ ಈ ಯೋಜನೆಯ ಫಲಾನುಭವಿಗಳು. ಉಳಿದಂತೆ ಪಡಿತರ ಚೀಟಿ ಹೊಂದಿದ ಸುಮಾರು 70.35 ಕೋಟಿ ಜನತೆಗೆ ಕುಟುಂಬದ ಪ್ರತೀ ಸದಸ್ಯನಿಗೆ ತಿಂಗಳಿಗೆ 5 ಕಿ.ಗ್ರಾಂ ಆಹಾರ ಧಾನ್ಯ ದೊರಕುತ್ತಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ವ್ಯಾಪ್ತಿಗೆ ಬರುವ ಗ್ರಾಮೀಣ ಮತ್ತು ನಗರ ನಿವಾಸಿಗಳ ಪ್ರಮಾಣವನ್ನು 75:50 ಎಂದು ಈ ಹಿಂದಿನ ಯೋಜನಾ ಆಯೋಗ ನಿಗದಿಗೊಳಿಸಿತ್ತು. 2011-12ರಲ್ಲಿ ನಡೆಸಿದ್ದ ಸಮೀಕ್ಷೆಯನ್ನು ಆಧರಿಸಿ ಈ ಅನುಪಾತವನ್ನು ನಿಗದಿಗೊಳಿಸಲಾಗಿದೆ. ಇದೇ ಅನುಪಾತವನ್ನು ಈಗಲೂ ಅನುಸರಿಸಿದರೆ, ಆಹಾರ ಭದ್ರತಾ ಕಾಯ್ದೆಯ ವ್ಯಾಪ್ತಿಗೆ ಬರುವ ಜನರ ಸಂಖ್ಯೆ 89.52 ಕೋಟಿಗೆ ಹೆಚ್ಚಲಿದೆ(ಈಗ 81.35 ಕೋಟಿ). ಅನುಪಾತವನ್ನು ಕಡಿಮೆ ಮಾಡಿದರೆ(60:40ಕ್ಕೆ) ಆಗ ಫಲಾನುಭವಿಗಳ ಪ್ರಮಾಣ 71.62 ಕೋಟಿಗೆ ಇಳಿಯಲಿದೆ ಎಂದು ನೀತಿ ಆಯೋಗದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

      ಕಳೆದ ದಶಕಗಳಲ್ಲಿ ಜನಸಂಖ್ಯೆಯಲ್ಲಿ ಆಗಿರುವ ಹೆಚ್ಚಳ ಮತ್ತು ಕಾಯ್ದೆಯ ವ್ಯಾಪ್ತಿಗೆ ಬರುವ ಫಲಾನುಭವಿಗಳ ಪ್ರಮಾಣ ಕಡಿಮೆಯಾದರೆ ಉಳಿತಾಯವಾಗುವ ಸಬ್ಸಿಡಿಯ ಹಣ ಮತ್ತು ಈ ಉಳಿಕೆ ಮೊತ್ತವನ್ನು ಇತರ ಮಹತ್ವದ (ಶಿಕ್ಷಣ, ಆರೋಗ್ಯ) ಅಭಿವೃದ್ಧಿ ಕಾರ್ಯಗಳಿಗೆ ಬಳಸುವ ಅವಕಾಶವನ್ನು ಗಮನಿಸಿ, ಗ್ರಾಮೀಣ-ನಗರ ಅನುಪಾತ ದರವನ್ನು ಈಗಿರುವ 75-50ರಿಂದ 60-40ಕ್ಕೆ ಇಳಿಸಲು ಶಿಫಾರಸು ಮಾಡಲಾಗಿದೆ . ನೀತಿ ಆಯೋಗದ ಸದಸ್ಯ ರಮೇಶ್ ಚಂದ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಮುಖ್ಯ ಆರ್ಥಿಕ ಸಲಹೆಗಾರರು, ಆಹಾರ ಇಲಾಖೆಯ ಕಾರ್ಯದರ್ಶಿ, ಅಂಕಿಅಂಶ ಮತ್ತು ಯೋಜನೆ ಅನುಷ್ಟಾನ ಸಚಿವಾಲಯದ ಕಾರ್ಯದರ್ಶಿ ಪಾಲ್ಗೊಂಡಿದ್ದರು ಎಂದು ವರದಿ ತಿಳಿಸಿದೆ.

         ಹೊಸ ಶಿಫಾರಸನ್ನು ಪರಿಗಣಿಸಿದರೆ, ಆಹಾರ ಭದ್ರತಾ ಕಾಯ್ದೆಯ ವ್ಯಾಪ್ತಿಯಿಂದ ಹೊರಗೆ ಉಳಿಯುವ ಫಲಾನುಭವಿಗಳಿಗೆ ಪರ್ಯಾಯ ವ್ಯವಸ್ಥೆ ರೂಪಿಸುವಂತೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ನೀತಿ ಆಯೋಗವನ್ನು ಕೇಳಿಕೊಂಡಿದೆ. ಆದರೆ ಈ ಬದಲಾವಣೆಯನ್ನು ಅನುಷ್ಟಾನಗೊಳಿಸಬೇಕಿದ್ದರೆ ಸಂಸತ್ತಿನಲ್ಲಿ ಮಸೂದೆಗೆ ಅಂಗೀಕಾರ ಪಡೆಯಬೇಕಾಗುತ್ತದೆ. ಬದಲಾವಣೆ ತರುವ ಅಧಿಕಾರ ಇಲಾಖೆಗೆ ಇಲ್ಲ ಎಂದು ಮೂಲಗಳು ಹೇಳಿವೆ.

            :

                ಶಾಂತಕುಮಾರ್ ಸಮಿತಿ ವರದಿ

      ಭಾರತದ ಆಹಾರ ನಿಗಮದ ಪಾತ್ರ ಮತ್ತು ಸ್ವರೂಪದ ಪುನರ್ರಚನೆಯ ಉದ್ದೇಶದಿಂದ ರಚಿಸಲ್ಪಟ್ಟಿದ್ದ ಶಾಂತಕುಮಾರ್ ಸಮಿತಿ 2015ರ ಜನವರಿಯಲ್ಲಿ ನೀಡಿದ್ದ ವರದಿಯಲ್ಲಿ 'ಪಡಿತರ ಆಹಾರ ವ್ಯವಸ್ಥೆಯ ವ್ಯಾಪ್ತಿಗೆ ಬರುವ ಜನರ ಪ್ರಮಾಣವನ್ನು 40%ಕ್ಕೆ ಕಡಿಮೆಗೊಳಿಸುವ (ಈಗ 67%) ಅಗತ್ಯವಿದೆ ಎಂದು ಉಲ್ಲೇಖಿಸಿತ್ತು.

        ಸರಕಾರ ಈಗ ನೀಡುತ್ತಿರುವ 4,22,618 ಕೋಟಿ ರೂ. ಸಬ್ಸಿಡಿ 'ನಿರ್ವಹಿಸಲಾಗದಷ್ಟು ಬೃಹತ್ ಮೊತ್ತವಾಗಿದೆ' ಎಂದು 2020-21ರ ಆರ್ಥಿಕ ಸಮೀಕ್ಷೆಯ ವರದಿಯಲ್ಲೂ ಉಲ್ಲೇಖಿಸಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries