ವಾಷಿಂಗ್ಟನ್ : ಬೃಹತ್ ಕ್ಷುದ್ರಗ್ರಹವೊಂದು ಮಾರ್ಚ್ 21ರಂದು ಭೂಮಿಯ ಪಕ್ಕದಲ್ಲಿಯೇ ಹಾದು ಹೋಗಲಿದೆ. ಇದು ಈ ವರ್ಷ ಭೂಮಿಯ ಸಮೀಪ ಬರಲಿರುವ ಅತಿ ದೊಡ್ಡ ಕ್ಷುದ್ರಗ್ರಹವಾಗಿದ್ದು, ನಮ್ಮ ಗ್ರಹದಿಂದ 1.25 ಮಿಲಿಯನ್ ಮೈಲು (ಎರಡು ಮಿಲಿಯನ್ ಕಿಮೀ) ದೂರದಲ್ಲಿ ಸಾಗಲಿದೆ ಎಂದು ನಾಸಾ ತಿಳಿಸಿದೆ.
ಈ ಅಪರೂಪದ ಕ್ಷುದ್ರಗ್ರಹವನ್ನು ನೋಡಲು ಖಗೋಳ ವೀಕ್ಷಕರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. 2001 F032 ಎಂಬ ಹೆಸರಿನ ಈ ಕ್ಷುದ್ರಗ್ರಹ ಸುಮಾರು 3,000 ವ್ಯಾಸ ಹೊಂದಿದ್ದು, 20 ವರ್ಷದ ಹಿಂದೆ ಪತ್ತೆಯಾಗಿತ್ತು ಎಂದು ಅದು ಮಾಹಿತಿ ನೀಡಿದೆ.
'ಸೂರ್ಯನ ಸುತ್ತಲಿನ 2001 F032ರ ಕಕ್ಷೆಯ ಪಥವು ನಮಗೆ ಬಹಳ ನಿಖರವಾಗಿ ತಿಳಿದಿದೆ. ಈ ಕ್ಷುದ್ರಗ್ರಹವು ಭೂಮಿಯ 1.25 ಮಿಲಿಯನ್ ಮೈಲು ಸಮೀಪಕ್ಕಿಂತ ಇನ್ನೂ ಹತ್ತಿರ ಬರಲು ಸಾಧ್ಯವೇ ಇಲ್ಲ' ಎಂದು ನಾಸಾ ಅರ್ಥ್ ಆಬ್ಜೆಕ್ಟ್ ಸ್ಟಡೀಸ್ ಕೇಂದ್ರದ ನಿರ್ದೇಶಕ ಪೌಲ್ ಚೊಡಾಸ್ ಹೇಳಿದ್ದಾರೆ.
ಭೂಮಿಯೊಂದಿಗೆ ಮುಖಾಮುಖಿಯಾಗುವ ಬಹುತೇಕ ಕ್ಷುದ್ರಗ್ರಹಗಳ ವೇಗಕ್ಕಿಂತ ಅತಿ ಹೆಚ್ಚು, ಗಂಟೆಗೆ 77 ಸಾವಿರ ಮೈಲು ವೇಗದಲ್ಲಿ 2001 F032 ಭೂಮಿಯನ್ನು ಹಾದುಹೋಗಲಿದೆ ಎಂದು ನಾಸಾ ತಿಳಿಸಿದೆ. ಕ್ಷುದ್ರಗ್ರಹದ ಗಾತ್ರವನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಹಾಗೂ ಅದರ ಹೊರಮೈನಲ್ಲಿ ಪ್ರತಿಫಲನವಾಗುವ ಬೆಳಕಿನ ಅಧ್ಯಯನ ಮಾಡುವ ಮೂಲಕ ಅದರ ಸಂಯೋಜನೆಯ ಬಗ್ಗೆ ಸ್ಥೂಲ ಅಂದಾಜು ಪಡೆಯಬಹುದು ಎಂದು ಅಭಿಪ್ರಾಯಪಟ್ಟಿದೆ.
'ಈ ವಸ್ತುವಿನ ಬಗ್ಗೆ ಬಹಳ ಕಡಿಮೆ ತಿಳಿದಿದೆ. ಹೀಗಾಗಿ ಭೂಮಿಯೊಂದಿಗಿನ ಅದರ ಸಮೀಪದ ಪ್ರಯಾಣವು ಈ ಕ್ಷುದ್ರಗ್ರಹದ ಕುರಿತು ಹೆಚ್ಚಿನ ವಿಚಾರಗಳನ್ನು ಅರಿಯಲು ಅಪೂರ್ವ ಅವಕಾಶ ಸಿಕ್ಕಂತಾಗಿದೆ' ಎಂದು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಮುಖ್ಯ ವಿಜ್ಞಾನಿ ಲ್ಯಾನ್ಸ್ ಬೆನ್ನರ್ ಹೇಳಿದ್ದಾರೆ.