ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ಇತ್ತೀಚೆಗೆ ಒಂದು ಮಹತ್ವದ, ದೂರಗಾಮಿ ಪರಿಣಾಮದ ತೀರ್ಪನ್ನು ನೀಡಿದೆ. ಪವಾಡಸದೃಶ ಮತ್ತು ಅಲೌಕಿಕ ಶಕ್ತಿಯನ್ನು ಹೊಂದಿದೆ ಎಂದು ಹೇಳಿಕೊಂಡು ಯಂತ್ರ, ತಾಯಿತ, ಪೆಂಡೆಂಟ್‌ನಂತಹ ವಸ್ತುಗಳನ್ನು ಟಿ.ವಿ ಜಾಹೀರಾತಿನ ಮೂಲಕ ಮಾರಾಟ ಮಾಡುವುದು ಕಾನೂನುಬಾಹಿರ ಎಂದು ಹೇಳಿದೆ. ಮಹಾರಾಷ್ಟ್ರದ ಮಾನವ ಬಲಿ ಮತ್ತು ಇತರ ಅಮಾನವೀಯ, ದುಷ್ಟ ಮತ್ತು ಅಘೋರಿ ಪದ್ಧತಿಗಳು ಹಾಗೂ ವಾಮಾಚಾರ ತಡೆಗಟ್ಟುವಿಕೆ ಮತ್ತು ನಿರ್ಮೂಲನಾ ಕಾಯ್ದೆ- 2013 ಅನ್ನು ನ್ಯಾಯಪೀಠ ಇದಕ್ಕೆ ಆಧಾರವಾಗಿ ಉಲ್ಲೇಖಿಸಿದೆ.
2013ರ ಆಗಸ್ಟ್‌ನಲ್ಲಿ, ಮೌಢ್ಯದ ವಿರುದ್ಧ ಹೋರಾಡುತ್ತಿದ್ದ ಅಂಧಶ್ರದ್ಧ ನಿರ್ಮೂಲನಾ ಸಮಿತಿಯ ಡಾ. ನರೇಂದ್ರ ದಾಭೋಲ್ಕರ್ ಅವರ ಹತ್ಯೆಯಾದ ಒಂದು ತಿಂಗಳ ಒಳಗೆ ಮಹಾರಾಷ್ಟ್ರ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತಂದಿತ್ತು. ಔರಂಗಾಬಾದಿನ ಶಿಕ್ಷಕ ರಾಜೇಂದ್ರ ಎನ್ನುವವರು ಹೂಡಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ, ಪವಾಡಸದೃಶ ವಸ್ತುಗಳ ಮಾರಾಟ, ಜಾಹೀರಾತನ್ನು ಕಾನೂನಾತ್ಮಕವಾಗಿ ನಿಷೇಧ ಮಾಡುವುದಕ್ಕಾಗಿ ಈ ಕಾಯ್ದೆಯನ್ನು ಬಳಕೆ ಮಾಡಿಕೊಂಡಿದ್ದು ನ್ಯಾಯಮೂರ್ತಿಗಳ ವೈಜ್ಞಾನಿಕ ಮನೋವೃತ್ತಿಯ ದ್ಯೋತಕವಾಗಿದೆ.
ಪ್ರಕರಣದಲ್ಲಿ ವಿಶಿಷ್ಟವಾಗಿ ಉಲ್ಲೇಖವಾಗಿದ್ದು ಹನುಮಾನ್ ಚಾಳೀಸ್ ಯಂತ್ರದ ಕುರಿತು. ಈ ಕುರಿತ ಜಾಹೀರಾತಿನಲ್ಲಿ 'ಇದರ ತಯಾರಕರು, ಸಿದ್ಧಿ ಪಡೆದ ಬಾಬಾ ಮಂಗಲನಾಥ್ ಎನ್ನುವವರು ತಮ್ಮ ದಿವ್ಯಶಕ್ತಿಯಿಂದ ಈ ಯಂತ್ರವನ್ನು ತಯಾರಿಸಿದ್ದಾರೆ. ಇದನ್ನು ಮನೆಗೊಯ್ದರೆ ಸ್ವತಃ ಹನುಮಾನ್ ದೇವರನ್ನೇ ಮನೆಯಲ್ಲಿ ಸ್ಥಾಪಿಸಿದಂತೆ. ಇದನ್ನು ತೊಟ್ಟುಕೊಳ್ಳುವ ವ್ಯಕ್ತಿಯು ಸದಾಕಾಲ ಆಂಜನೇಯ ತನ್ನನ್ನು ಎಲ್ಲ ಕಷ್ಟಗಳಿಂದ ರಕ್ಷಿಸುತ್ತಿದ್ದಾನೆ ಎಂಬ ಭಾವನೆಯನ್ನು ತಾಳುತ್ತಾನೆ' ಎಂಬ ಒಕ್ಕಣೆ ಇತ್ತು. ದೇವರಲ್ಲಿ ನಂಬಿಕೆ ಬೇರೆ, ದೇವರ ಹೆಸರಿನಲ್ಲಿ ವಂಚನೆಯ ವ್ಯಾಪಾರ ಬೇರೆ.
ಈ ವಸ್ತುವನ್ನು ಮಾರಾಟ ಮಾಡುವವರು ಅದಕ್ಕೆ ಇದೆ ಎಂದು ಪ್ರತಿಪಾದಿಸುವ ಶಕ್ತಿ ಇದೆ ಎಂಬುದನ್ನು ಸಾಧಿಸಿ ತೋರಿಸಿಲ್ಲವಾದ್ದರಿಂದ, ಇದು ಅಪರಾಧವಾಗುತ್ತದೆ ಎಂದು ದ್ವಿಸದಸ್ಯ ನ್ಯಾಯಪೀಠ ವ್ಯಾಖ್ಯಾನಿಸಿದೆ.
ಪ್ರಕರಣದಲ್ಲಿ ಭಾರತ ಮತ್ತು ಮಹಾರಾಷ್ಟ್ರ ಸರ್ಕಾರಗಳಲ್ಲದೆ, ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಫೌಂಡೇಷನ್‌ನಂತಹ ಜಾಹೀರಾತು ಮೇಲ್ವಿಚಾರಣೆ ಸಂಸ್ಥೆಗಳು ಮತ್ತು ಜಾಹೀರಾತಿನಲ್ಲಿ ಸ್ವತಃ ಕಾಣಿಸಿಕೊಂಡು, 'ಈ ವಸ್ತುವಿನ ಪವಾಡಸದೃಶ ಅನುಭವವನ್ನು ನಾವು ಪಡೆದಿದ್ದೇವೆ' ಎಂಬ ಹೇಳಿಕೆಯನ್ನು ಕೊಟ್ಟಿರುವ ಮನೋಜ್ ಕುಮಾರ್, ಅನುರಾಧಾ ಪೌಡ್‌ವಾಲ್, ಅನೂಪ್ ಝಲೋಟಾ, ಮುಕೇಶ್ ಖನ್ನಾರಂಥ ತಾರೆಯರನ್ನೂ
ಪ್ರತಿವಾದಿಗಳನ್ನಾಗಿ ಮಾಡಿರುವುದು ವಿಶೇಷ.
ವಿದ್ಯಾವಂತರು ಹೆಚ್ಚಾಗಿರುವ ಮಹಾರಾಷ್ಟ್ರದಂಥ ರಾಜ್ಯದಲ್ಲಿ ಈಗಲೂ ಇಂಥ ಮೌಢ್ಯವಿರುವುದಲ್ಲದೆ, ಅದನ್ನು ಲಾಭ ಗಳಿಕೆಗಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದಿರುವ ನ್ಯಾಯಪೀಠ, 'ವೈಜ್ಞಾನಿಕ ಮನೋವೃತ್ತಿ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಮನೋಭಾವವನ್ನು ಬೆಳೆಸಿಕೊಳ್ಳುವುದಕ್ಕೆ ಹೆಚ್ಚಿನ ಮಹತ್ವ ಸಿಗಬೇಕಾಗಿದೆ' ಎಂದು ಅಭಿಪ್ರಾಯಪಟ್ಟಿದೆ.
ಇನ್ನೊಂದು ವಿಶೇಷವೆಂದರೆ, ತೀರ್ಪಿನಲ್ಲಿ, ಕೇಬಲ್ ಟೆಲಿವಿಷನ್ ನೆಟ್‌ವರ್ಕ್ (ರೆಗ್ಯುಲೇಷನ್) ಆಯಕ್ಟ್, 1995 ಅನ್ನೂ ಉಲ್ಲೇಖಿಸಲಾಗಿದೆ. ಇದರ ನಿರ್ಬಂಧಗಳನ್ನು ಬಳಸಿ ರಾಜ್ಯ ಸರ್ಕಾರವು ತಕ್ಷಣವೇ ಇಂಥ ಜಾಹೀರಾತುಗಳನ್ನು ಟಿ.ವಿ ಚಾನೆಲ್‌ಗಳು ಪ್ರಸಾರ ಮಾಡುವುದನ್ನು ತಡೆಯಬೇಕು ಎಂದು ನಿರ್ದೇಶನ ನೀಡಿದೆ. ಈ ಪ್ರಕರಣವು ದಾಖಲಾಗಿದ್ದು 2015ರಲ್ಲಿ, ಆದರೆ ತೀರ್ಪು ಹೊರಬಂದಿದ್ದು 2021ರಲ್ಲಿ. ಈ ವಿಳಂಬವೇ ಸಾರ್ವಜನಿಕ ಹಿತಾಸಕ್ತಿ ಪ್ರಕರಣವನ್ನು ಹೂಡುವವರ ಉತ್ಸಾಹಕ್ಕೆ ತಣ್ಣೀರೆರಚುತ್ತದೆ.
ಕಾಯ್ದೆಯ ಅಡಿಯಲ್ಲಿ, ದೇವರ ಹೆಸರಿನಲ್ಲಿ ಸುಳ್ಳು ಭರವಸೆಗಳನ್ನು ನೀಡುವ ವಸ್ತುಗಳ ಮಾರಾಟ ಮತ್ತು ಅವುಗಳ ಜಾಹೀರಾತುಗಳ ಪ್ರಸಾರವನ್ನು ನಿಲ್ಲಿಸುವುದೇ?