ಮುಂಬೈ: ದೇಶಾದ್ಯಂತ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮನೆ- ಮನೆಗೆ- ಕೋವಿಡ್ ಲಸಿಕೆ ವಿತರಣೆಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ಅಸಮ್ಮತಿ ವ್ಯಕ್ತಪಡಿಸಿದೆ.
ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಲಸಿಕೆ ನೀಡಲು ಅನುಕೂಲವಾಗುವಂತೆ ಮನೆ ಮನೆಗೆ ಲಸಿಕೆ ವಿತರಣೆಗೆ ಅನುಮತಿ ನೀಡುವಂತೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿಕೊಂಡಿತ್ತು. ಆದರೆ, ಅಂತಹ ಯಾವುದೇ ನೀತಿ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಬೂತ್ ಮಟ್ಟದಲ್ಲಿ ಲಸಿಕೆ ನೀಡುವಂತಹ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಮುಂಬೈಯಲ್ಲಿ ಸುಮಾರು 1.5 ಲಕ್ಷ ಜನರು ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಾಗಿದ್ದು,ಮನೆಯಿಂದ ಹೊರಗೆ ಬಂದು ಲಸಿಕೆ ಪಡೆಯಲು ಸಾಧ್ಯವಿಲ್ಲದಿರುವುದರಿಂದ ಅವರ ಮನೆಗೆ ಭೇಟಿ ನೀಡಿ ಲಸಿಕೆ ನೀಡಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಲಾಗಿತ್ತು. ಆದರೆ, ಇಂತಹ ಯಾವುದೇ ನೀತಿ ಇಲ್ಲ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿರುವುದಾಗಿ ಬಿಎಂಸಿ ಹೆಚ್ಚುವರಿ ಮುನ್ಸಿಪಲ್ ಆಯುಕ್ತ ಸುರೇಶ್ ಕಾಕನಿ ಹೇಳಿದ್ದಾರೆ.