ತಿರುವನಂತಪುರ: ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 60 ರೂ.ಗೆ ಪೆಟ್ರೋಲ್ ಮತ್ತು ಡೀಸೆಲ್ ನೀಡಲಾಗುವುದು ಎಂದು ಬಿಜೆಪಿ ಮಾಜಿ ರಾಜ್ಯ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಹೇಳಿದ್ದಾರೆ. ಬಿಜೆಪಿ ಕೇರಳದಲ್ಲಿ ಅಧಿಕಾರಕ್ಕೆ ಬಂದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನ್ನು ಜಿಎಸ್ಟಿ ಅಡಿಯಲ್ಲಿ ತರಲಾಗುವುದು ಎಂದು ಅವರು ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೈಲ ಬೆಲೆ ಬದಲಾವಣೆಯು ಜಾಗತಿಕ ಏರಿಳಿತಗಳಿಗೆ ಅನುಗುಣವಾಗಿದೆ ಎಂದು ಹೇಳಿದರು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ತೆರಿಗೆ ಬಹಳ ಕಡಿಮೆ ಇದೆ. ಕೇಂದ್ರ ತೆರಿಗೆ ಕೇವಲ 19 ಶೇಕಡಾ ಮಾತ್ರವಾಗಿದೆ. ಅದಕ್ಕಿಂತ ಹೆಚ್ಚಿನದನ್ನು ಕೇಂದ್ರ ಸರ್ಕಾರ ವಿಧಿಸುತ್ತಿದೆ ಎಂದು ಮಾಧ್ಯಮಗಳು ಸೂಚಿಸಿದಾಗ ಅದು ಮರುಪಾವತಿ ಮಾಡುತ್ತಿದೆ ಎಂದು ಕುಮ್ಮನಂ ಹೇಳಿದರು.
ತೈಲ ಬೆಲೆ ಜಿಎಸ್‍ಟಿಯಲ್ಲಿ ಸೇರಿಸಲು ಸಿದ್ಧ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ. ರಾಜ್ಯಗಳು ಸಿದ್ಧವಾದರಷ್ಟೇ ಅದನ್ನು ಜಾರಿಗೆ ತರಲು ಸಾಧ್ಯ. ಆದರೆ ಕೇರಳ ಸರ್ಕಾರ ಸಿದ್ಧವಾಗಿಲ್ಲ. ಸಿಪಿಐ (ಎಂ) ಮತ್ತು ಕಾಂಗ್ರೆಸ್ ಈ ಬಗ್ಗೆ ಪ್ರತಿಕ್ರಿಯಿಸಲು ಹಿಂದೇಟು ಹಾಕುತ್ತಿವೆ ಎಂದು ಕುಮ್ಮನ್ ಆರೋಪಿಸಿದ್ದಾರೆ.