ಢಾಕಾ: ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಪಾಲ್ಗೊಂಡು ಜೈಲಿಗೆ ಹೋಗಿದ್ದೆ ಎಂದು ಪ್ರಧಾನಿ ನರೇಂಗ್ರ ಮೋದಿ ಹೇಳಿದ್ದಾರೆ.
2 ದಿನಗಳ ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ನಿನ್ನೆ ಢಾಕಾದ ರಾಷ್ಟ್ರೀಯ ಪೆರೇಡ್ ಗ್ರೌಂಡ್ನಲ್ಲಿ ಬಾಂಗ್ಲಾದೇಶದ 50ನೇ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಬಾಂಗ್ಲಾದೇಶ ವಿಮೋಚನೆಗಾಗಿ ನಡೆಸಿದ ಪ್ರತಿಭಟನೆ ತಮ್ಮ ರಾಜಕೀಯ ಜೀವನದ ಮೊದಲ ಹೋರಾಟವಾಗಿತ್ತು. ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮವು ತಮ್ಮ ಜೀವನದ ಮಹತ್ವದ ಕ್ಷಣಗಳಲ್ಲಿ ಒಂದು. ನಾನು 20ನೇ ವಯಸ್ಸಿನಲ್ಲಿದ್ದಾಗ ನನ್ನ ಸಹೋದ್ಯೋಗಿಗಳು ಬಾಂಗ್ಲಾದೇಶ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಮಾಡಿದ್ದೇವೆ. ಈ ವೇಳೆ ಜೈಲಿಗೆ ಹೋಗುವ ಅವಕಾಶವೂ ಸಿಕ್ಕಿತು ಎಂದು ತಮ್ಮ ಹೋರಾಟದ ದಿನಗಳನ್ನು ಪ್ರಧಾನಿ ಮೋದಿ ಮೆಲುಕು ಹಾಕಿದರು.
ಇದು ನನ್ನ ಅವಿಸ್ಮರಣೀಯ ದಿನಗಳಲ್ಲಿ ಒಂದು. ಬಾಂಗ್ಲಾದೇಶ ಈ ಐತಿಹಾಸಿಕ ಕ್ಷಣಗಳಲ್ಲಿ ತಮ್ಮನ್ನು ಸೇರಿಸಿಕೊಂಡಿದ್ದಕ್ಕೆ ಧನ್ಯವಾದಗಳನ್ನು ಎಂದು ತಿಳಿಸುತ್ತೇನೆ. ಇದೇ ವೇಳೆ ಮುಂದಿನ 25 ವರ್ಷಗಳು ಭಾರತ ಮತ್ತು ಬಾಂಗ್ಲಾದೇಶಕ್ಕೆ ನಿರ್ಣಾಯಕವಾಗಲಿದೆ. ನಮ್ಮ ಪರಂಪರೆಯನ್ನು ಹಂಚಿಕೊಳ್ಳಲಾಗಿದೆ, ನಮ್ಮ ಬೆಳವಣಿಗೆಯನ್ನು ಹಂಚಿಕೊಳ್ಳಲಾಗಿದೆ. ನಮ್ಮ ಗುರಿ ಮತ್ತುಅವಕಾಶಗಳನ್ನು ಹಂಚಿಕೊಳ್ಳಲಾಗಿದೆ. ವ್ಯಾಪಾರ ಮತ್ತು ಉದ್ಯಮದಲ್ಲಿ ಒಂದೇ ರೀತಿಯ ಅವಕಾಶಗಳು ಇರುವುದರ ಜೊತೆಗೆ ಭಯೋತ್ಪಾದನೆಯಲ್ಲಿ ಕೂಡ ಒಂದೇ ರೀತಿಯ ಸವಾಲುಗಳಿವೆ ಎಂದರು.
ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರು, 'ದೇಶದ ಸ್ವಾತಂತ್ರ್ಯಕ್ಕಾಗಿ ಬಾಂಗ್ಲಾದೇಶದ ಸೈನಿಕರು ಮಾಡಿದ ತ್ಯಾಗವನ್ನು ನಾವು ಮರೆಯುವುದಿಲ್ಲ. ಇದರ ಜೊತೆಗೆ ನೆರೆಯ ದೇಶಕ್ಕಾಗಿ ಭಾರತದ ಸೈನಿಕರು ಮಾಡಿದ ತ್ಯಾಗ ಧೈರ್ಯವೂ ಮರೆತಿಲ್ಲ. ಮರೆಯುವುದೂ ಇಲ್ಲ ಎಂದು ಹೇಳಿದರು.
ಇದೇ ವೇಳೆ ಜಾಗತಿಕ ಸೋಂಕಿನ ವಿರುದ್ಧ ಭಾರತ ತಯಾರಿಸಿದ ಲಸಿಕೆಯನ್ನು ಬಾಂಗ್ಲಾದೇಶ ಬಳಸುತ್ತಿರುವುದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು. ಎರಡು ದಿನಗಳ ಬಾಂಗ್ಲಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ನಿನ್ನೆ ಬೆಳಗ್ಗೆ ಬಾಂಗ್ಲಾ ವಿದೇಶಾಂಗ ಮಂತ್ರಿ ಎಕೆ ಅಬ್‌ಉದ್ಧ ಮೊಮೆನ್ ಅವರೊಂದಿಗೆ ಮಾತುಕತೆ ನಡೆಸಿದರು.