ಕಟ್ಟಡ ನಿರ್ವಣದಲ್ಲಿ ಪರ್ಯಾಯ ವಿಧಾನಗಳು ಬಂದಿವೆ. ಅವುಗಳ ಬಗ್ಗೆ ಸೂಕ್ತ ಅರಿವು ತುಂಬುವ ಕೆಲಸ ಆಗಬೇಕಿದೆ. ಆ ಕುರಿತಂತೆ ಹೆಚ್ಚೆಚ್ಚು ಚರ್ಚೆ, ಅಧ್ಯಯನ ನಡೆದು ಅಳವಡಿಕೆಗೆ ಪೂರಕ ವಾತಾವರಣ ರೂಪುಗೊಳ್ಳಬೇಕು. ಯಾವುದು ನಿಜವಾಗಿಯೂ 'ಸುಂದರ' ಕಟ್ಟಡ ಎಂಬುದನ್ನು ಅರಿಯಬೇಕು.
ಸಾಮಾನ್ಯವಾಗಿ ಮೊದ ಮೊದಲು ಗೃಹಪ್ರವೇಶದ ಆಮಂತ್ರಣ ಬಂದರೆ ಅಂಥ ಕಾರ್ಯಕ್ರಮಗಳಿಗೆ ಹೋಗಲು ಸಂತೋಷವಾಗುತ್ತಿತ್ತು. ಸುಂದರವಾದ ಕಟ್ಟಡ, ಅವುಗಳ ವಿನ್ಯಾಸ, ನುಣುಪಾದ ಗೋಡೆಗಳು, ಅಲಂಕಾರ, ಬಣ್ಣಬಣ್ಣದ ನೆಲಹಾಸುಗಳು, ಸಿಂಕ್ನ ಬಣ್ಣಗಳು, ಟೈಲ್ಸ್ನಿಂದ ಮಾಡಿದ ಚಿತ್ತಾರಗಳು… ಇವುಗಳ ಜತೆಗೆ ಅಡುಗೆಮನೆಯಲ್ಲಿ ಮಾಡಿದ ವಿನ್ಯಾಸವೂ ನನಗೆ ಇಷ್ಟವಾಗುತ್ತಿತ್ತು. ಅಲ್ಲಿ ಉಪಯೋಗಿಸುತ್ತಿದ್ದ ಹೊಸ ಹೊಸ ಐಡಿಯಾಗಳು ಗಮನ ಸೆಳೆಯುತ್ತಿದ್ದವು. ನೋಡ್ತಾ ನೋಡ್ತಾ ಬೇರೆ ಜಗತ್ತು ಪ್ರವೇಶಿಸಿದಂತೆ ಆಗುತ್ತಿತ್ತು. ಮನೆ ತೋರಿಸುತ್ತ ಅದರ ಮಾಲೀಕರು ನೀಡುತ್ತಿದ್ದ ವಿವರಣೆ ಕೇಳಲೂ ಖುಷಿಯಾಗುತ್ತಿತ್ತು. ಆದರೀಗ…?
ಐಜ್ಞಟ್ಟಚ್ಞ್ಚ ಜಿಠ ಚ್ಝಿಜಿಠಠ: ನಮಗೆ ಸರಿಯಾದ ಮಾಹಿತಿ ಇಲ್ಲದ ಪರಿಣಾಮವಾಗಿ ಆ ಎಲ್ಲ ಸಂಗತಿಗಳು ಖುಷಿ ಕೊಡುತ್ತಿದ್ದವು. ಇವತ್ತು ಅದೇ ದೊಡ್ಡ ಕಟ್ಟಡಗಳು, ಕಟ್ಟಡ ವಿನ್ಯಾಸ, ಝುಗಮಗಿಸುವ ದೀಪ, ಹೊಳೆಯುವ ಗ್ರಾನೈಟ್, ಉದ್ದವಾದ ರಸ್ತೆಗಳನ್ನು ನೋಡಿದರೂ ಖುಷಿಯಾಗುವುದಿಲ್ಲ. ಮನಸ್ಸಿನಲ್ಲಿ ಏನೋ ಕಳವಳ. ಇದರ ಹಿಂದೆ ಗಹನವಾದ ಕಾರಣವೂ ಇದೆ. ಒಂದ್ನಿಮಿಷ ಆ ಕಾರಣಗಳ ಬಗ್ಗೆ ಯೋಚಿಸುತ್ತ, ಪರ್ಯಾಯದ ಬಗ್ಗೆಯೂ ಚಿಂತನೆ ಮಾಡುವ ಸಮಯ ಈಗ ಬಂದಿದೆ.
ಜನಸಾಮಾನ್ಯರು ಅಥವಾ ನಾಯಕರ ಭಾಷೆಯಲ್ಲಿ ಸುಧಾರಣೆ ಅಥವಾ ಅಭಿವೃದ್ಧಿ ಎಂದರೆ ಸಿಮೆಂಟ್, ಕಾಂಕ್ರಿಟ್ ಉಪಯೋಗಿಸಿ ನಿರ್ಮಾಣ ಎಂಬಂತಾಗಿದೆ. ಕಟ್ಟಡ, ರಸ್ತೆ, ಸೌಧಗಳ ನಿರ್ಮಾಣ ಇದನ್ನೇ 'ಅಭಿವೃದ್ಧಿ' ಎಂದು ಕರೆಯುತ್ತಿದ್ದೇವೆ. ಈ ಪ್ರಥೆ ನಮ್ಮ ದೇಶದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಇದೆ. ಅತಿ ಹೆಚ್ಚು ಸಿಮೆಂಟ್, ಸ್ಟೀಲ್ ಬಳಸುವವರು ಅಭಿವೃದ್ಧಿ ಹೊಂದುತ್ತಿರುವ ಅಥವಾ ಹೊಂದಿದ ರಾಷ್ಟ್ರಗಳೇ. ಅಭಿವೃದ್ಧಿ ಹೊಂದಿದ ಅಥವಾ ಹೊಂದುತ್ತಿರುವ ಮಹಾನಗರಗಳಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ವಾಯುಮಾಲಿನ್ಯ. ನನ್ನ ಕಳೆದ ಲೇಖನದಲ್ಲಿ 'ಉಸಿರಾಡುವ ಗಾಳಿಯೇ ವಿಷವಾದರೆ ಬದುಕುವುದು ಹೇಗೆ?' ಎಂಬ ಶೀರ್ಷಿಕೆಯಲ್ಲಿ ವಾಯುಮಾಲಿನ್ಯ ತಂದೊಡ್ಡಿರುವ ಭೀಕರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದೆ. ಈ ಗಾಳಿ ವಿಷಪೂರಿತವಾಗಲು ಪ್ರಮುಖ ಕಾರಣ ಕಟ್ಟಡನಿರ್ವಣ ಎಂಬುದು ಅಚ್ಚರಿಯಾದರೂ ಸತ್ಯ. ನಗರಗಳಲ್ಲಿ ನಿರ್ವಣವಾಗುತ್ತಿರುವ ಫ್ಲೈಓವರ್ಗಳು, ಕಟ್ಟಡ, ಮನೆಗಳು ವಾಯುಮಾಲಿನ್ಯಕ್ಕೆ ದೊಡ್ಡ ಪಾಲು ನೀಡುತ್ತಿವೆ.
ಕಳೆದ 20-25 ವರ್ಷಗಳಲ್ಲಿ ನಮ್ಮ ದೇಶದಲ್ಲಿ ಸಿಮೆಂಟ್, ಮರಳು, ಸ್ಟೀಲ್ ಬಳಕೆ ಸಿಕ್ಕಾಪಟ್ಟೆ ಹೆಚ್ಚಳವಾಗಿದೆ. ಇದರಿಂದಾಗುತ್ತಿರುವ ಮಾಲಿನ್ಯದ ಪ್ರಮಾಣ ಆತಂಕಕಾರಿ ಎನ್ನುವಷ್ಟು ಹೆಚ್ಚಿದೆ. ಕಟ್ಟಡ ನಿರ್ಮಾಣ ಸ್ಥಳದಲ್ಲಿ ನಡೆಯುವ ಆಳವಾದ ಅಗೆಯುವಿಕೆ, ದೊಡ್ಡ ಯಂತ್ರಗಳನ್ನು ಉಪಯೋಗಿಸಿ ಮಣ್ಣನ್ನು ಅಗೆದಾಗ ಧೂಳಿನಿಂದಾಗುವ ಮಾಲಿನ್ಯ ತೀವ್ರ ಥರದ್ದು. ಮಣ್ಣನ್ನು ಎತ್ತಿಕೊಂಡು ಮತ್ತೊಂದೆಡೆ ಸಾಗಿಸುವಾಗ ಅದೊಂದು ಬೇರೆಯದ್ದೇ ಸಮಸ್ಯೆ. ಇದಕ್ಕೆ ಉಪಯೋಗಿಸುವ ಯಂತ್ರಗಳಿಗೆ ಬಳಸುವ ಇಂಧನವೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂಬುದನ್ನು ಗಮನಿಸಬೇಕು.
ಕಟ್ಟಡ ನಿರ್ವಣಕ್ಕೆ ಬೇಕಾಗುವ ಕಚ್ಚಾವಸ್ತುಗಳನ್ನು ತಯಾರಿಸುವುದು, ಅಂದರೆ, ಸಿಮೆಂಟ್ನಿಂದ ಕಾಂಕ್ರೀಟ್ ತಯಾರಿಸುವುದು, ಅದನ್ನು ತೆಗೆದುಕೊಂಡು ಸುರಿಯುವ ಪ್ರಕ್ರಿಯೆ ಕೂಡ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಹಳೆಯ ಕಟ್ಟಡ ಬೀಳಿಸುವುದು, ಅಲಿ ್ಲೃಷ್ಟಿಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದು- ಈ ಹಂತದಲ್ಲೂ ಹೆಚ್ಚೆಚ್ಚು ಧೂಳು ಗಾಳಿಯನ್ನು ಸೇರುತ್ತದೆ. ಬಣ್ಣಗಳು ಮತ್ತು ಥಿನ್ನರ್ಸ್ ಬಳಕೆಯೂ ವಾಯುಮಾಲಿನ್ಯಕ್ಕೆ ಕಾರಣ. ಕಟ್ಟಡ ನಿರ್ವಣಗಳ ಮೂಲಸೌಕರ್ಯ ಅಭಿವೃದ್ಧಿಯಿಂದ ವಾಯುವಿಗೆ ಹಲವು ರಾಸಾಯನಿಕಗಳು ಸೇರುತ್ತಿವೆ. ಮುಖ್ಯವಾಗಿ, ಪಿಎಂ-10 ಅಂದರೆ 10 ಮೈಕ್ರಾನ್ಗಿಂತ ಚಿಕ್ಕ ಗಾತ್ರದ ಧೂಳಿನ ಕಣಗಳು. ಭಾಷ್ಪಶೀಲ ಸಾವಯವ ಸಂಯುಕ್ತಗಳು (volatile organic compound), ಕಲ್ನಾರು (Asbestos), ಕಾರ್ಬನ್ ಮೊನಾಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್. ಈ ಎಲ್ಲ ರಾಸಾಯನಿಕಗಳು ಗಾಳಿಗೆ ಸೇರಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಇದು ಸ್ಥಳೀಯವಾಗಿ ಉಂಟಾಗುವ ಸಮಸ್ಯೆಯಾದರೆ, ಇನ್ನು ಕಟ್ಟಡ ನಿರ್ವಣದ ಮೂಲವಸ್ತುಗಳನ್ನು ತಯಾರಿಸುವ ಸ್ಥಳದಲ್ಲಿನ ಪರಿಸ್ಥಿತಿ ಇನ್ನೂ ಆತಂಕಕಾರಿ.
1000 ಕೆಜಿ ಸಿಮೆಂಟ್ ತಯಾರಿಸುವ ಮತ್ತು ಸಾಗಿಸುವ (ಸಿಮೆಂಟ್ನ 20 ಬ್ಯಾಗ್ಗಳು) ಪ್ರಕ್ರಿಯೆಯಲ್ಲಿ ಸರಾಸರಿ 900 ಕೆಜಿ ಕಾರ್ಬನ್ ಡೈಕ್ಸೈಡ್ ಗಾಳಿಯನ್ನು ಸೇರುತ್ತದೆ. ಮಾನವ ನಿರ್ವಿುತ ಕಾರ್ಬನ್ ಡೈಆಕ್ಸೈ ಡ್ನಲ್ಲಿ ಶೇಕಡ 8-10ರಷ್ಟು ಪಾಲಿರುವುದು ಸಿಮೆಂಟ್ ಉದ್ಯಮದ್ದೇ. ಮರಳು ಗಣಿಗಾರಿಕೆಯಿಂದ ನದಿಗಳ ಒಡಲು ಬರಿದಾಗುತ್ತಿದೆ. ಜಲಚರಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಕಬ್ಬಿಣದ ಗಣಿಗಾರಿಕೆ, ಕಬ್ಬಿಣವನ್ನು ಬೇರೆ ಬೇರೆ ಸ್ವರೂಪಗಳಲ್ಲಿ ಪಡೆಯಲು ನಡೆಸುವ ಪ್ರಕ್ರಿಯೆಯೂ ಮಾಲಿನ್ಯ ಸೃಷ್ಟಿಸುತ್ತಿದೆ. ಕಟ್ಟಡ ನಿರ್ವಣಕ್ಕೆ ಸಿಮೆಂಟ್, ಮರಳು, ಕಬ್ಬಿಣ ಅವಶ್ಯವಾಗಿ ಬೇಕು. ಆದರೆ, ಬೇರೆ ಬೇರೆ ಬಣ್ಣಗಳು, ಟೈಲ್ಸ್, ಗ್ರಾನೈಟ್, ಪೇಂಟ್ಗಳು ಅಲಂಕಾರಕ್ಕೆ ಬಳಸುವಂಥವು. ಈ ಸಾಮಗ್ರಿಗಳು ಕೂಡ ಕಣ್ಣಿಗೆ ಕಾಣದಂತೆ ರಾಸಾಯನಿಕಗಳನ್ನು ಹೊರಸೂಸುತ್ತವೆ. ಇಟ್ಟಿಗೆಗಳು ತಲೆತಲಾಂತರಗಳಿಂದ ಕಟ್ಟಡನಿರ್ವಣದ ಭಾಗಗಳಾಗಿವೆ. ಆದರೆ, ಮಣ್ಣಿನ ಇಟ್ಟಿಗೆಗಳನ್ನು ಉಪಯೋಗಿಸುವುದು ಕಡಿಮೆಯಾಗಿದ್ದು, ಸಿಮೆಂಟ್, ಮರಳಿನ ಇಟ್ಟಿಗೆಗಳ ಬಳಕೆ ಹೆಚ್ಚಿರುವುದು ಕಳವಳಕಾರಿ.
ಹಾಗಿದ್ದರೆ ಉಪಾಯವೇನು?: ಪರ್ಯಾಯ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಕಂಡುಹಿಡಿಯಲಾಗಿಲ್ಲ ಅಂತೇನಿಲ್ಲ. ವಿಶೇಷವಾಗಿ ಭಾರತದಲ್ಲಿ ನಮ್ಮ ಪೂರ್ವಿಕರು, ಹಿರಿಯರು ಮನೆ ನಿರ್ವಣಕ್ಕಾಗಿ ಬಳಸುತ್ತಿದ್ದ ವಸ್ತುಗಳು ಪರಿಸರಸ್ನೇಹಿಯಾಗಿದ್ದವು ಎಂಬುದನ್ನು ಅವಲೋಕಿಸಿಕೊಳ್ಳಬೇಕು. ಸಿಮೆಂಟ್, ಕಬ್ಬಿಣ, ಮರಳಿನ ಬಳಕೆಯನ್ನು ಪೂರ್ಣಪ್ರಮಾಣದಲ್ಲಿ ನಿಲ್ಲಿಸುವುದು ಸಾಧ್ಯವಿಲ್ಲದಿದ್ದರೂ ಇಂದಿನ ದಿನಗಳಲ್ಲಿ ಪರಿಸರಸ್ನೇಹಿ ಕಟ್ಟಡಗಳ ನಿರ್ವಣದ ಬಗ್ಗೆ ತಿಳಿದುಕೊಳ್ಳುವುದು ಮತ್ತು ಆ ನಿರ್ವಣದ ಸಾಧ್ಯತೆಯನ್ನು ಸಾಕಾರಗೊಳಿಸುವತ್ತ ಗಮನ ನೀಡುವುದು ಅಸಾಧ್ಯವೇನಲ್ಲ.
ಕಟ್ಟಡ ನಿರ್ವಣದಲ್ಲಿ ಸಿಮೆಂಟ್ ಬಳಕೆ ಹೇಗೆ ಕಡಿಮೆ ಮಾಡುವುದು? 100 ಚೀಲ ಸಿಮೆಂಟ್ ಬಳಸುವಲ್ಲಿ 20 ಚೀಲ ಬಳಸಿ, ಕಾಮಗಾರಿ ಮಾಡಬಹುದಾದ ಪರ್ಯಾಯ ವಿಧಾನಗಳನ್ನು ನಮ್ಮ ಆರ್ಕಿಟೆಕ್ಟ್ ಇಂಜಿನಿಯರ್ಗಳು ಮುಂದಿಟ್ಟಿದ್ದಾರೆ. ಅದೇ ರೀತಿ, ನೆಲ ಅಗೆದಿರುವ ಮಣ್ಣಿನಿಂದಲೇ ಇಟ್ಟಿಗೆ ತಯಾರಿಸಿ, ಬಳಸುತ್ತಿದ್ದಾರೆ. ಸಾಧ್ಯವಾದಷ್ಟು ಹಸಿ ಇಟ್ಟಿಗೆ ಬಳಸುತ್ತಿದ್ದಾರೆ. ಕಟ್ಟಡ ನಿರ್ಮಾಣ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಎಲ್ಲ ಕಡೆ ಪ್ಲಾಸ್ಟರಿಂಗ್ನ ಅವಶ್ಯಕತೆಯೂ ಇಲ್ಲ. ಎಲ್ಲಿ ತೀರಾ ಅವಶ್ಯವೋ ಅಲ್ಲಿ ಪ್ಲಾಸ್ಟರಿಂಗ್ ಮಾಡಿದರೆ ಸಾಕು. ಕಬ್ಬಿಣದ ಬಳಕೆಯನ್ನು ತಗ್ಗಿಸಿ ಕಟ್ಟಡ ನಿರ್ಮಾಣ ಮಾಡಬಹುದಾದ ದಾರಿಗಳನ್ನು ತಜ್ಞರು ತೋರಿಸಿಕೊಟ್ಟಿದ್ದಾರೆ.
ಪರಿಸರಸ್ನೇಹಿ ಬಣ್ಣಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಇನ್ನು, ನೆಲಕ್ಕೆ ಮಾರ್ಬಲ್, ಗ್ರಾನೈಟ್ ಅನಿವಾರ್ಯವೇನಲ್ಲ. ಪ್ರತಿಯೊಂದು ಸಂಗತಿಯಲ್ಲೂ ಪರ್ಯಾಯ ಪರಿಸರಸ್ನೇಹಿ ಉತ್ಪನ್ನಗಳನ್ನು ಬಳಸಬೇಕು. ಇದರಿಂದ ಎರಡು ಲಾಭ. ಮೊದಲನೆಯದು, ಸ್ಥಳೀಯ ವಸ್ತುಗಳನ್ನು ಬಳಸುವುದರಿಂದ ಬೆಲೆಯೂ ಕಡಿಮೆ. ಎರಡನೆಯದಾಗಿ, ಸಾಗಾಟದ ಕಿರಿಕಿರಿ, ಇಂಧನದ ಮಾಲಿನ್ಯ ತಪ್ಪಿಸಬಹುದು. ಸಾಧ್ಯವಾದಷ್ಟು ಪರಿಸರ ಮಾಲಿನ್ಯಕ್ಕೆ ಆಸ್ಪದ ಕೊಡದೆ ಮನೆ ಕಟ್ಟಿದರೆ ಅದು ಸುಂದರವಾಗಿಯೂ ಇರುತ್ತದೆ, ನಮ್ಮ ಆರೋಗ್ಯಕ್ಕೂ ಹಿತವಾಗಿರುತ್ತದೆ.
ಸಹಜತೆಯಲ್ಲಿ ಸೌಂದರ್ಯ: ಸಹಜವಾದ ವಸ್ತುಗಳು ಸುಂದರವಾಗಿಯೇ ಕಾಣುತ್ತವೆ. ಅಷ್ಟಕ್ಕೂ, ಸೌಂದರ್ಯ ಎಂಬುದು ನಮ್ಮ ನೋಟದಲ್ಲಿರುತ್ತದೆ. ತೀರಾ ಹೊಳಪಿನ, ಝುಗಮಗಿಸುವ ಕೃತಕ ಸೌಂದರ್ಯದ ಹಿಂದೆ ಪರಿಸರ ಶೋಷಿಸಲ್ಪಟ್ಟಿರುತ್ತದೆ, ಎಷ್ಟೋ ಜಲಚರಗಳು ಸತ್ತಿರುತ್ತವೆ, ವಾಯುಮಾಲಿನ್ಯ ಆಗಿರುತ್ತದೆ, ರಾಸಾಯನಿಕಗಳು ಹೊಮ್ಮುತ್ತವೆ ಎಂಬುದನ್ನು ಗಮನಿಸಿ, ಅರ್ಥ ಮಾಡಿಕೊಂಡರೆ ಹೊಳಪು ಸುಂದರವಾಗಿ ಕಾಣುವುದಿಲ್ಲ. ಆಗ ನಿಜವಾದ ಸಹಜತೆಯೇ ಸುಂದರವಾಗಿ ಕಾಣುತ್ತದೆ.
ಇತ್ತೀಚೆಗೆ ನಗರವಾಸಿಗಳು, ವಾಸ್ತುತಜ್ಞರು, ಸಂಸ್ಥೆಗಳು ಪರಿಸರಸ್ನೇಹಿ ಕಟ್ಟಡಗಳ ನಿರ್ವಣದ ಬಗ್ಗೆ ಗಮನ ನೀಡುತ್ತಿದ್ದಾರೆ ಎಂಬುದು ಸ್ವಲ್ಪ ಸಮಾಧಾನಕರ ಸಂಗತಿ. ಕೆಲ ದಶಕಗಳಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ಅದೆಷ್ಟೋ ಜನರು ಪರಿಸರಸ್ನೇಹಿ ಮನೆ, ಕಚೇರಿಗಳನ್ನು ನಿರ್ವಿುಸಿದ್ದಾರೆ. ಅಲ್ಲದೆ, ಸೌರಶಕ್ತಿಯ ಬಳಕೆ, ತ್ಯಾಜ್ಯ, ಸಗಣಿಯಿಂದ ತಯಾರಿಸಿದ ಗ್ಯಾಸ್ ಬಳಕೆ, ಮಳೆನೀರನ್ನು ಸಂಗ್ರಹಿಸಿ ಅದನ್ನು ಮರುಬಳಕೆ ಮಾಡುವವರು ಕಾಣಸಿಗುತ್ತಿದ್ದಾರೆ ಎಂಬುದು ಸಣ್ಣದೊಂದು ಆಶಾಕಿರಣ. ಜತೆಗೆ, ಕೇಂದ್ರ ಸರ್ಕಾರ ಭಾರತೀಯ ಹಸಿರು ಕಟ್ಟಡ ಪ್ರಾಧಿಕಾರ (Indian Green Building Council) ರಚಿಸಿದೆ. ಈ ಮೂಲಕ ನಿವ್ವಳ ಶೂನ್ಯಶಕ್ತಿಯ ಬಳಕೆ (Net zero energy building) ಮಾಪನವನ್ನು ಜನರ ಮುಂದಿರಿಸಿದೆ. ಅಂದರೆ, ಕಟ್ಟಡ ನಿರ್ವಣಕ್ಕೆ ಇಂಧನ ಆದಷ್ಟು ತಗ್ಗಿಸುವುದು. ಅಲ್ಲದೆ, ಸೌರಶಕ್ತಿ ಉತ್ಪಾದನೆ, ಮಳೆನೀರಿನ ಬಳಕೆ, ಹೆಚ್ಚು ಗಿಡಗಳನ್ನು ಬೆಳೆಸುವಿಕೆಯಂಥ ಕ್ರಮದಿಂದ ಬಳಸಿದ ಇಂಧನಕ್ಕೆ ಅಥವಾ ಸೃಷ್ಟಿಸಿದ ಮಾಲಿನ್ಯಕ್ಕೆ ಪ್ರತಿಯಾಗಿ ಪರಿಹಾರ ಭರಿಸಿ ಕೊಡುವುದು. ಇದು ನಿವ್ವಳ ಶೂನ್ಯ ಮಾಡುವ ಕ್ರಮ. ಎರಡು ವರ್ಷದ ಹಿಂದೆ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಒಂದು ದಿನದ ಸಮಾವೇಶವನ್ನು ಅಲ್ಲಿನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಸೇರಿ ಆಯೋಜಿಸಿದ್ದರು. ಆ ಕಾರ್ಯಕ್ರಮದ ಉದ್ಘಾಟನೆಗೆ ಹೋದಾಗ ನಿವ್ವಳ ಶೂನ್ಯ ಇಂಧನ ಕಟ್ಟಡದ ಬಗ್ಗೆ ಸಾಕಷ್ಟು ವಿಷಯ ತಿಳಿದುಕೊಳ್ಳಲು ಸಾಧ್ಯವಾಯಿತು.
ನಾವೇನು ಮಾಡಬಹುದು?: ನಾವು ಮನೆಯನ್ನು ಕಟ್ಟುವಾಗ ಕಟ್ಟಡ ಹೇಗೆ ನಿರ್ವಣಗೊಂಡಿದೆ, ಅದಕ್ಕೆ ಯಾವೆಲ್ಲ ಮೂಲವಸ್ತುಗಳನ್ನು ಬಳಸಲಾಗಿದೆ, ಅವು ಯಾವೆಲ್ಲ ತೊಂದರೆ ಉಂಟು ಮಾಡುತ್ತಿವೆ ಎಂಬುದು ತಿಳಿದುಕೊಂಡರೆ ಹಲವು ಸಂಗತಿಗಳು ಸ್ಪಷ್ಟವಾಗಿ ಅರಿವಿಗೆ ಬರುತ್ತವೆ. ಕಟ್ಟಡ ನಿರ್ವಣದ ಪರ್ಯಾಯ ವಿಧಾನಗಳ ಬಗ್ಗೆ ನಾವು ತಿಳಿದುಕೊಳ್ಳುವ ಜತೆಗೆ, ಇತರರಿಗೂ ತಿಳಿಸಬೇಕು. ಈ ಬಗ್ಗೆ ಅಧ್ಯಯನಗಳು ಹೆಚ್ಚಬೇಕು. ಸಂಸ್ಥೆಗಳು ಪರಿಸರಸ್ನೇಹಿ ಮನೆಗಳ ಬಗ್ಗೆ ಕಾರ್ಯಾಗಾರಗಳನ್ನು ನಡೆಸಿ, ಮಾಹಿತಿ ನೀಡಬೇಕು. ಈಗಾಗಲೇ ಪರಿಸರಸ್ನೇಹಿ ಮನೆ ನಿರ್ವಿುಸಿದ ಮಾಲೀಕರನ್ನು, ಇಂಜಿನಿಯರ್ಗಳನ್ನು ಗುರುತಿಸಿ, ಗೌರವಿಸಬೇಕು.
ತೇಜಸ್ವಿನಿ ಅನಂತಕುಮಾರ್