ವಾರಣಾಸಿ : ವಾರಣಾಸಿಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಶನಿವಾರ ಪ್ರಯಾಣಿಕನೋರ್ವ ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಯತ್ನಿಸಿದ್ದು, ವಿಮಾನದ ಸಿಬ್ಬಂದಿ ವಿಮಾನ ಸುರಕ್ಷಿತವಾಗಿ ವಿಮಾನ ನಿಲ್ದಾಣದಲ್ಲಿ ಇಳಿಯುವ ವರೆಗೆ ತಡೆದರು.
ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆಯಲು ಯತ್ನಿಸಿದ ಪ್ರಯಾಣಿಕನನ್ನು ಗೌರವ್ ಎಂದು ಗುರುತಿಸಲಾಗಿದೆ. ವಿಮಾನ ವಾರಣಾಸಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದ ಬಳಿಕ ಕೇಂದ್ರ ಕೈಗಾರಿಕೆ ಭದ್ರತಾ ಪಡೆ (ಸಿಐಎಸ್‌ಎಫ್) ಹಾಗೂ ಸ್ಪೈಸ್ ಜೆಟ್ ಭದ್ರತಾ ಸಿಬ್ಬಂದಿ ಆತನನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಸ್ಪೈಸ್ ಜೆಟ್‌ನ ವಕ್ತಾರ ಹೇಳಿದ್ದಾರೆ.
ಘಟನೆ ಬಗ್ಗೆ ವಿವರಣೆ ನೀಡಿದ ಸ್ಪೈಸ್‌ಜೆಟ್, ವಾರಣಾಸಿಗೆ ತೆರಳುತ್ತಿದ್ದ ಸೈಸ್ ಜೆಟ್ ವಿಮಾನದಲ್ಲಿ ಶನಿವಾರ ಈ ಅನಿರೀಕ್ಷಿತ ಘಟನೆ ನಡೆಯಿತು. ಗೌರವ್ ಎಂಬ ಪ್ರಯಾಣಿಕ ತುರ್ತು ನಿರ್ಗಮನದ ಬಾಗಿಲ ಕಡೆ ತೆರಳಿ, ಅದನ್ನು ತೆರೆಯಲು ಪ್ರಯತ್ನಿಸಿದ ಎಂದು ಹೇಳಿದೆ.
''ಕೂಡಲೇ ವಿಮಾನದ ಮಹಿಳಾ ಸಿಬ್ಬಂದಿ ಸಹ ಪ್ರಯಾಣಕರ ನೆರವು ತೆಗೆದುಕೊಂಡು ವಿಮಾನ ವಾರಣಾಸಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯುವರೆಗೆ ತಡೆದರು'' ಎಂದು ಏರ್‌ಲೈನ್ಸ್ ಹೇಳಿದೆ.