ತಿರುವನಂತಪುರ: ಸಚಿವರಾದ ಇ.ಪಿ. ಜಯರಾಜನ್ ಮತ್ತು ಕೆ.ಟಿ ಜಲೀಲ್ ಸೇರಿದಂತೆ ಇತರರು ವಿಧಾನ ಸಭೆ ಗಲಭೆ ಪ್ರಕರಣದ ದೂರು ಹಿಂಪಡೆಯಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಇಂದು ಹ್ಯೆಕೋರ್ಟ್ ತಿರಸ್ಕರಿಸಿದೆ. ಸಾರ್ವಜನಿಕ ಆಸ್ತಿ ನಾಶ ಪ್ರಕರಣವನ್ನು ಖುಲಾಸೆಗೊಳಿಸಲು ಚುನಾವಣಾ ನೀತಿಸಂಹಿತೆಯ ಹಿನ್ನೆಲೆ ಸರ್ಕಾರಕ್ಕೆ ಸಾಧ್ಯವಾಗದೆಂಬ ಕಾರಣ ನೀಡಿ ನ್ಯಾಯಾಲಯ ಅರ್ಜಿ ನಿರಾಕರಿಸಿತು.
ಈ ಹಿಂದೆ ಪ್ರಕರಣವನ್ನು ಹಿಂಪಡೆಯುವಂತೆ ಸರ್ಕಾರದ ಮನವಿಯನ್ನು ತಿರುವನಂತಪುರ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿತ್ತು. ನಂತರ ಸರ್ಕಾರ ಹೈಕೋರ್ಟ್‌ನಲ್ಲಿ ಪರಿಷ್ಕ್ರತ ಅರ್ಜಿ ಸಲ್ಲಿಸಿತ್ತು. ಜನ ಪ್ರತಿನಿಧಿಗಳನ್ನು ಒಳಗೊಂಡ ಪ್ರಕರಣವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಲು ಸಾಧ್ಯವಿಲ್ಲ ಮತ್ತು ಆದ್ದರಿಂದ ಪ್ರಕರಣವನ್ನು ಹಿಂಪಡೆಯಲಾಗುತ್ತಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿತು. ಆದರೆ ನ್ಯಾಯಾಲಯ ಈ ವಾದವನ್ನು ಒಪ್ಪಲಿಲ್ಲ. 2015 ರ ಮಾರ್ಚ್ 13 ರಂದು ಅಂದಿನ ಹಣಕಾಸು ಸಚಿವ ಕೆ.ಎಂ.ಮಾಣಿ ಅವರು ಸ್ಪೀಕರ್ ಚೇಂಬರ್‌ಗೆ ಪ್ರವೇಶಿಸಿ ಬಜೆಟ್ ಮಂಡಿಸುವಾಗ ಕುರ್ಚಿಯನ್ನು ಉರುಳಿಸಿ ಗಲಭೆ ಎಬ್ಬಿಸಲಾಗಿತ್ತು. ಈ ವೇಳೆ 2.5 ಲಕ್ಷ ರೂ ನಷ್ಟ ಉಂಟಾಗಿತ್ತು. ಅಸೆಂಬ್ಲಿ ಕಾರ್ಯದರ್ಶಿಯ ದೂರಿನ ಮೇರೆಗೆ ಆಗಿನ ಆರು ಶಾಸಕರ ವಿರುದ್ಧ ಕಂಟೋನ್ಮೆಂಟ್ ಪೊಲೀಸರು ಈ ಪ್ರಕರಣವನ್ನು ದಾಖಲಿಸಿದ್ದು, ಸಾರ್ವಜನಿಕ ಆಸ್ತಿ-ಪಾಸ್ತಿ ನಾಶ ಕಾಯ್ದೆಯಡಿ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದಲ್ಲಿ ಇ.ಪಿ.ಜಯರಾಜನ್, ಕೆ.ಟಿ.ಜಲೀಲ್, ಕೆ ಅಜಿತ್, ಕೆ ಕುಂಜುಮುಹಮ್ಮದ್, ಸಿ.ಕೆ ಸದಾಶಿವನ್ ಮತ್ತು ವಿ ಶಿವಂಕುಟ್ಟಿ ಆರೋಪಿಗಳಾಗಿದ್ದಾರೆ.