ಬದಿಯಡ್ಕ: ಕುಂಬಳೆ ಫಿರ್ಕಾ ಬಂಟರ ಸಂಘದ ಆಶ್ರಯದಲ್ಲಿ ಕುಂಬಳೆ ಫಿರ್ಕಾಕ್ಕೆ ಒಳಪಟ್ಟ ಆರು ಪಂಚಾಯತಿ ಘಟಕಗಳ ಸ್ವಜಾತಿಯ ನೂತನ ಜನಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭ ಮತ್ತು ಕುಂಬಳೆ ಫಿರ್ಕಾದ ಮಾಜಿ ಅಧ್ಯಕ್ಷ ಸಿ.ಸಂಜೀವ ರೈ ಕೆಂಗಣಾಜೆ ಇವರಿಗೆ ಸನ್ಮಾನ ಕಾರ್ಯಕ್ರಮ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಭಾನುವಾರ ನಡೆಯಿತು.
ಕುಂಬಳೆ ಫಿರ್ಕಾ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಬಿ.ಸುಬ್ಬಯ್ಯ ರೈ ಉದ್ಘಾಟಿಸಿ ಮಾತನಾಡಿ, ಬಂಟರಿಗೆ ರಾಜಕೀಯ ಪ್ರವೃತ್ತಿ ಅನಿವಾರ್ಯ. ಪರಂಪರಾಗತವಾಗಿ ಬಂಟರು ಆಡಳಿತ ನಡೆಸಿದವರು. ಬಂಟರಿಗೆ ಬೇರೆಬೇರೆ ರಾಜಕೀಯ ಪಕ್ಷಗಳಿದ್ದರೂ ಸಂಘದ ವೇದಿಕೆಯಲ್ಲಿ ಎಲ್ಲರೂ ಒಂದೆಂಬ ಭಾವನೆ ಇರಬೇಕು. ಉತ್ತಮ ಸಮಾಜ ಸೇವೆಯ ಮೂಲಕ ಲಭ್ಯ ಅವಕಾಶವನ್ನು ಸದುಪಯೋಗಪಡಿಸಿ ಸಂಘಕ್ಕೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಪಿ.ಜಿ.ಚಂದ್ರಹಾಸ ರೈ ಪೆರಡಾಲ, ಕೋಶಾಧಿಕಾರಿ ಚಿದಾನಂದ ಆಳ್ವ, ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟಕುಂಜ, ಕ್ಯಾಂಪ್ಕೋ ನಿರ್ದೇಶಕ ಸುರೇಶ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ವಿವಿಧ ಪಂಚಾಯತಿ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಮಹಿಳಾ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜನಪ್ರತಿನಿಧಿಗಳು ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಕಾರ್ಯದರ್ಶಿ ಅಶೋಕ ರೈ ಕೊರೆಕ್ಕಾನ ಸ್ವಾಗತಿಸಿ, ಶರತ್ ಚಂದ್ರ ಶೆಟ್ಟಿ ವಂದಿಸಿದರು. ನಿರಂಜನ ರೈ ಪೆರಡಾಲ ಮತ್ತು ಹರ್ಷಕುಮಾರ್ ರೈ ಬೆಳಿಂಜ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಆಳ್ವ ಉಜಾರ್, ಹರಿಪ್ರಸಾದ್ ರೈ ಕಾಟುಕುಕ್ಕೆ ಸಹಕರಿಸಿದರು.