ನವದೆಹಲಿ: ಜಿದ್ದಾಜಿದ್ದಿನ ಚುನಾವಣಾ ಪ್ರಚಾರ ಮತ್ತು ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಮಧ್ಯೆ ಶನಿವಾರ ಚಹಾ ನಾಡು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನಕ್ಕೆ ಚಾಲನೆ ಸಿಕ್ಕಿದೆ.
ತಮ್ಮ ಚುನಾವಣಾ ಪ್ರಣಾಳಿಕೆಗಳು, ಭರವಸೆಗಳು ಮತ್ತು ಪರಸ್ಪರ ಆರೋಪ-ಪ್ರತ್ಯಾರೋಪಗಳ ಮೂಲಕ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಟಿಎಂಸಿ ಮತ್ತು ಭಾರತೀಯ ಜನತಾ ಪಾರ್ಟಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ.
ಪಶ್ಚಿಮ ಬಂಗಾಳದಲ್ಲಿ ಇಂದಿನಿಂದ ಎಂಟು ಹಂತಗಳಲ್ಲಿ ಮತದಾನ ನಡೆಯಲಿದ್ದು ಇಂದು ಮೊದಲ ಹಂತದಲ್ಲಿ 30 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಪಶ್ಚಿಮ ಬಂಗಾಳದ ಪುರುಲಿಯಾ, ಜರ್ಗ್ರಮ್ ಮತ್ತು ಇತರ ಕ್ಷೇತ್ರಗಳಾದ ಬಂಕುರ, ಪುರ್ಬ ಮೇದಿನೀಪುರ್ ಮತ್ತು ಪಶ್ಚಿಮ್ ಮೇದಿನೀಪುರ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಒಟ್ಟಾರೆ ಇಂದು 191 ಅಭ್ಯರ್ಥಿಗಳ ಅದರಲ್ಲಿ 21 ಮಹಿಳೆಯರ ಭವಿಷ್ಯ ನಿರ್ಧಾರವಾಗಲಿದೆ.
ಪಶ್ಚಿಮ ಬಂಗಾಳದಲ್ಲಿ ಮುಂದಿನ ಹಂತದ ಮತದಾನ ಏಪ್ರಿಲ್ 1 ರಂದು ನಡೆಯಲಿದೆ; ನಂತರ ಏಪ್ರಿಲ್ 6 ರಂದು, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಅಂತಿಮ ಹಂತ ಏಪ್ರಿಲ್ 29 ರಂದು ನಡೆಯಲಿದ್ದು ಫಲಿತಾಂಶ ಮೇ 2 ರಂದು ಘೋಷಿಸಲಾಗುತ್ತದೆ.
ನೆರೆಯ ಅಸ್ಸಾಂನಲ್ಲಿ ಮೂರು ಹಂತಗಳ ವಿಧಾನಸಭಾ ಚುನಾವಣೆಯ ಇಂದಿನ ಮೊದಲ ಹಂತದಲ್ಲಿ 47 ಕ್ಷೇತ್ರಗಳು ಮತದಾನ ಎದುರಿಸುತ್ತಿವೆ.
ಇಂದು ಒಟ್ಟು 81,09,815 ಜನರು ಮತ ಚಲಾಯಿಸಲಿದ್ದು, ಈ ಪೈಕಿ 40,77,210 ಪುರುಷ ಮತದಾರರು, 40,32,481 ಮಹಿಳಾ ಮತದಾರರು ಮತ್ತು 114 ಮಂದಿ ತೃತೀಯ ಲಿಂಗ ಮತದಾರರಾಗಿದ್ದಾರೆ. ಮೊದಲ ಹಂತಕ್ಕೆ 264 ಅಭ್ಯರ್ಥಿಗಳು (241 ಪುರುಷ ಮತ್ತು 23 ಮಹಿಳಾ ಅಭ್ಯರ್ಥಿಗಳು) ಕಣದಲ್ಲಿದ್ದಾರೆ. ಮೊದಲ ಹಂತದಲ್ಲಿ 11,537 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಈ ಪೈಕಿ 9,620 ಮುಖ್ಯ ಮತದಾನ ಕೇಂದ್ರಗಳು ಮತ್ತು 1,917 ಸಹಾಯಕ ಮತದಾನ ಕೇಂದ್ರಗಳಾಗಿವೆ.
ದೇಶದಲ್ಲಿ ಒಟ್ಟು ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ತಿಂಗಳು ಮತ್ತು ಮುಂದಿನ ತಿಂಗಳು ಚುನಾವಣೆ ನಡೆಯುತ್ತಿದೆ.