ಲಂಡನ್ : ಕೊರೊನಾ ಲಸಿಕೆಯ ಒಂದು ಡೋಸ್ ಕೊರೊನಾ ಸೋಂಕಿನ ಅಪಾಯದಿಂದ ಶೇ.50ರಷ್ಟು ದೂರವಿಡಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ಈ ಕುರಿತಂತೆ ಬ್ರಿಟನ್ ಮೂಲದ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ (ಪಿಎಚ್‌ಇ) ಸಂಶೋಧನೆ ನಡೆಸಿ ಈ ವರದಿಯನ್ನು ಪ್ರಕಟಿಸಿದ್ದು, ಬ್ರಿಟನ್ ನಲ್ಲಿ ನೀಡಲಾಗುತ್ತಿರುವ ಫೈಜರ್ ಅಥವಾ ಅಸ್ಟ್ರಾಜೆನೆಕಾ ಲಸಿಕೆಗಳ ಒಂದು ಡೋಸ್ ಕೊರೊನವೈರಸ್ ಲಸಿಕೆಯಿಂದಾಗಿ ಶೇ.50ರಷ್ಟು ಸೋಂಕಿನಿಂದ ರಕ್ಷಣೆ ಪಡೆಯಬಹುದು ಎಂದು ಹೇಳಿದೆ.
ಒಂದು ಕುಟುಂಬದಲ್ಲಿ ಓರ್ವರಿಗೆ ಸೋಂಕು ತಗುಲಿದರೆ ಅವರಿಂದ ಇಡೀ ಕುಟುಂಬದವರಿಗೆ ಸೋಂಕು ತಗುಲುವ ಅಪಾಯವಿರುತ್ತದೆ. ಆದರೆ ಆ ಕುಟುಂಬದಲ್ಲಿನ ವ್ಯಕ್ತಿಯೊಬ್ಬರು ಒಂದು ಡೋಸ್ ಕೋವಿಡ್ ಲಸಿಕೆ ಪಡೆದರೆ ಸೋಂಕಿನಿಂದ ಶೇ.38ರಿಂದ ಶೇ.49ರಷ್ಟು ರಕ್ಷಣೆ ಪಡೆದಂತೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಅಧ್ಯಯನಕ್ಕಾಗಿ ಬ್ರಿಟನ್ ಸುಮಾರು 24,000 ಮನೆಗಳಲ್ಲಿನ 57,000 ಕ್ಕೂ ಹೆಚ್ಚು ಮಂದಿಯಿಂದ ದತ್ತಾಂಶ ಸಂಗ್ರಹಿಸಲಾಗಿದೆ. ಇದರಲ್ಲಿ ವ್ಯಾಕ್ಸಿನೇಷನ್ ಪಡೆದ ಲ್ಯಾಬ್-ದೃಢಪಡಿಸಿದ ಪ್ರಕರಣಗಳಿವೆ.
ಅಂತೆಯೇ ಸುಮಾರು ಒಂದು ಮಿಲಿಯನ್ ಲಸಿಕೆ ಪಡೆಯದ ವ್ಯಕ್ತಿಗಳಿಂದಲೂ ದತ್ತಾಂಶ ಸಂಗ್ರಹ ಮಾಡಲಾಗಿದ್ದು, ಲಸಿಕೆ ಪಡೆದವಿರಿಗಿಂತ ಲಸಿಕೆ ಪಡೆಯದ ಕುಟುಂಬಗಳಲ್ಲಿ ಸೋಂಕು ಪ್ರಸರಣ ಪ್ರಮಾಣ ಶೇ. 65ರಷ್ಟು ಹೆಚ್ಚಿದೆ.
ವರದಿಯಲ್ಲಿರುವಂತೆ ಲಸಿಕೆ ಪಡೆದ ವ್ಯಕ್ತಿ ಶೇ.38ರಿಂದ ಶೇ.49ರಷ್ಟು ಸೋಂಕಿನಿಂದ ರಕ್ಷಣೆ ಪಡೆಯುತ್ತಾರೆ. ಹೀಗಾಗಿ ಕೋವಿಡ್ ಸಾಂಕ್ರಾಮಿಕದಿಂದ ಲಸಿಕೆ ರಕ್ಷಣೆ ನೀಡುತ್ತದೆ ಎಂಬುದು ಮತ್ತೆ ಸಾಬೀತಾಗಿದೆ ಎಂದು ಹೇಳಲಾಗಿದೆ.
ಲಸಿಕೆ ಕೇವಲ ಸೋಂಕು ಪ್ರಸರಣವನ್ನು ಮಾತ್ರವಲ್ಲದೇ ಸಾಕಷ್ಟು ಅನಾರೋಗ್ಯಗಳನ್ನು ತಪ್ಪಿಸಿ ಸಂಭಾವ್ಯ ಸಾವುಗಳನ್ನು ತಪ್ಪಿಸುತ್ತದೆ ಎಂದು PHE ಯ ರೋಗನಿರೋಧಕ ವಿಭಾಗದ ಮುಖ್ಯಸ್ಥ ಮೇರಿ ರಾಮ್ಸೆ ಹೇಳಿದ್ದಾರೆ.
ಈ ಹಿಂದೆ ಇದೇ PHE ಸಂಸ್ಥೆ ನಡೆಸಿದ್ದ ಸಂಶೋಧನೆಯಲ್ಲಿ ಲಸಿಕೆ ವಿತರಣೆಯಿಂದ ಬ್ರಿಟನ್ ನಲ್ಲಿ ಆಗಬಹುದಾಗಿದ್ದ 10,400 ಕೋವಿಡ್ ಸಂಬಂಧಿ ಸಾವುಗಳು ತಪ್ಪಿದೆ ಎಂದು ಹೇಳಿತ್ತು.