ನವದೆಹಲಿ : ಭಾರತದಲ್ಲಿ ಉಲ್ಬಣವಾಗಿರುವ ಕರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ಕರೊನಾ ರೋಗಿಗಳ ಚಿಕಿತ್ಸೆಗೆ ವೈದ್ಯಕೀಯ ಆಕ್ಸಿಜನ್ನ ಅಗತ್ಯ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಉದ್ದೇಶಕ್ಕೆ ಆಕ್ಸಿಜನ್ ಲಭ್ಯಗೊಳಿಸುವುದಕ್ಕಾಗಿ ದೇಶದ ಅತಿದೊಡ್ಡ ಕಾರು ಉತ್ಪಾದಕ ಕಂಪೆನಿ ಮಾರುತಿ ಸುಜುಕಿ ಒಂಭತ್ತು ದಿನಗಳು ಹರಿಯಾಣ ಮತ್ತು ಗುಜರಾತ್ನಲ್ಲಿರುವ ತನ್ನ ಕಾರ್ಖಾನೆಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ.
ತನ್ನ ವಾರ್ಷಿಕ ಮೇನ್ಟೆನೆನ್ಸ್ ಶಟ್ಡೌನ್ ಜೂನ್ನಲ್ಲಿ ನಡೆಯುವುದು ನಿಗದಿಯಾಗಿದೆ. ಆದರೆ ಈಗಿನ ಕರೊನಾ ಸನ್ನಿವೇಶದಲ್ಲಿ, ವೈದ್ಯಕೀಯ ಅಗತ್ಯಗಳಿಗೆ ಆಮ್ಲಜನಕ ಲಭ್ಯವಿರಬೇಕೆಂಬ ಕಾರಣಕ್ಕೆ ಕಂಪೆನಿಯನ್ನು ಮುಂಚಿತವಾಗಿ ಅಂದರೆ ಮೇ 1 ರಿಂದ ಮೇ 9 ರವರೆಗೆ ಮುಚ್ಚಲಾಗುವುದು ಕಂಪೆನಿ ಹೇಳಿಕೆ ನೀಡಿದೆ. ಹರಿಯಾಣದಲ್ಲಿರುವ ಮಾರುತಿ ಸುಜುಕಿ ಉತ್ಪಾದನಾ ಘಟಕಗಳನ್ನು ಮತ್ತು ಗುಜರಾತ್ನಲ್ಲಿರುವ ಸುಜುಕಿ ಮೋಟರ್ನ ಉತ್ಪಾದನಾ ಘಟಕವನ್ನು ಈ ಅವಧಿಯಲ್ಲಿ ಮುಚ್ಚುವ ನಿರ್ಧಾರವನ್ನು ಕಂಪೆನಿ ಪ್ರಕಟಿಸಿದೆ.
'ಜನರ ಪ್ರಾಣ ಉಳಿಸಲು ಕೈಗಾರಿಕಾ ಬಳಕೆಯಿಂದ ಆಕ್ಸಿಜನ್‌ಅನ್ನು ಹೊರಗೆಳೆಯುವಲ್ಲಿ ಸರ್ಕಾರವನ್ನು ಕಂಪೆನಿ ಬೆಂಬಲಿಸುತ್ತದೆ. ಕಾರು ಉತ್ಪಾದನಾ ಪ್ರಕ್ರಿಯೆಯಲ್ಲಿ ಮಾರುತಿ ಸುಜುಕಿ ಅಲ್ಪಪ್ರಮಾಣದ ಆಕ್ಸಿಜನ್‌ಅನ್ನು ಕಾರ್ಖಾನೆಗಳಲ್ಲಿ ಬಳಸುತ್ತದೆ. ಇದಕ್ಕಿಂತ ಹೆಚ್ಚು ಪ್ರಮಾಣವನ್ನು ಕಾಂಪೊನೆಂಟ್ಗಳನ್ನು ಉತ್ಪಾದಿಸುವಲ್ಲಿ ಬಳಸಲಾಗುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲಾ ಆಕ್ಸಿಜನ್‌ಅನ್ನು ಪ್ರಾಣಗಳನ್ನು ಉಳಿಸಲು ಬಳಸಬೇಕು ಎಂದು ನಾವು ನಂಬಿದ್ದೇವೆ' ಎಂದು ಮಾರುತಿ ಸುಜುಕಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.