ನವದೆಹಲಿ: ಸಣ್ಣ ತರಕಾರಿಯೊಂದರ ಕುರಿತ ಸುದ್ದಿಯೊಂದು ಐಎಎಸ್ ಅಧಿಕಾರಿಯಿಂದ ಹಿಡಿದು ಮಾಧ್ಯಮಗಳವರೆಗೂ ಎಲ್ಲರನ್ನೂ ಬಕ್ರಾ ಮಾಡಿರುವ ಘಟನೆ ನಡೆದಿದೆ.
"ಹಾಪ್‌ಶೂಟ್ಸ್"...ಬಹುಶಃ ಈ ಒಂದು ಹೆಸರು ಕಳೆದೊಂದು ತಿಂಗಳಿನಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಕಾರಣ ಇದೊಂದು ಜಗತ್ತಿನ ಅತೀ ದುಬಾರಿ ತರಕಾರಿಯಾಗಿದ್ದು, ಈ ತರಕಾರಿ ಒಂದು ಕೆಜಿ 1 ಲಕ್ಷ ರೂ ಎಂಬ ಸುದ್ದಿ ವ್ಯಾಪಕ ವೈರಲ್ ಆಗಿತ್ತು. ಆದರೆ ಈ ತರಕಾರಿಯ ಬಗ್ಗೆ ತಿಳಿಯಲು ಹೊರಟ ಪತ್ರಕರ್ತರ ತಂಡವೊಂದು ಇದರ ಅಸಲೀಯತ್ತು ಬಹಿರಂಗ ಮಾಡಿದ್ದು ಅಸಲಿಗೆ ಇಂತಹುದೊಂದು ತರಕಾರಿಯೇ ಇಲ್ಲವೆಂಬ ಮಾಹಿತಿಯನ್ನು ಹೊರಗೆಡವಿದ್ದಾರೆ.
ಈ ಹಿಂದೆ, 'ಔರಂಗಾಬಾದ್ ಜಿಲ್ಲೆಯ ರೈತನೊಬ್ಬ ಪ್ರತಿ ಕೆಜಿಗೆ ಒಂದು ಲಕ್ಷ ರೂಪಾಯಿ ದರದಲ್ಲಿ ಮಾರಾಟ ಮಾಡಿದ್ದಾನೆ ಎಂಬ ಐಎಎಸ್ ಅಧಿಕಾರಿಯೊಬ್ಬರ ಟ್ವೀಟ್ ಕೆಲ ದಿನಗಳ ಹಿಂದೆ ದೊಡ್ಡ ಸುದ್ದಿ ಮಾಡಿತ್ತು. "ಈ ತರಕಾರಿಯ ಒಂದು ಕೆಜಿಗೆ ಸುಮಾರು ಒಂದು ಲಕ್ಷ ರೂಪಾಯಿ ಬೆಲೆ ! ಹಾಪ್ ಶೂಟ್ಸ್ ಎಂಬ ದುಬಾರಿ ತರಕಾರಿಯನ್ನು ಬಿಹಾರದ ರೈತ ಅಮರೇಶ್ ಸಿಂಗ್ ಬೆಳೆದಿದ್ದಾನೆ. ಇದು ಭಾರತೀಯ ಕೃಷಿಕರ ಗೇಮ್‌ಚೇಂಜರ್ ಆಗಬಹುದೇ" ಎಂದು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಮಾರ್ಚ್ 21ರಂದು ಟ್ವೀಟ್ ಮಾಡಿದ್ದರು. ಇದನ್ನು 24 ಸಾವಿರ ಮಂದಿ ಲೈಕ್ ಮಾಡಿದ್ದರು ಹಾಗೂ 5 ಸಾವಿರ ಮಂದಿ ಮರು ಟ್ವೀಟ್ ಮಾಡಿದ್ದರು.
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರ ಟ್ವೀಟ್ ಅನ್ನು ಆಧರಿಸಿ ಮಾಧ್ಯಮಗಳೂ ಕೂಡ ಈ ಬಗ್ಗೆ ವ್ಯಾಪಕ ಸುದ್ದಿ ಮಾಡಿದ್ದವು. ಆದರೆ ಈ ಸುದ್ದಿಯ ಅಸಲೀಯತ್ತು ಹುಡುಕಿ ಹೊರಟ ಹಿಂದಿ ಪತ್ರಿಕೆ ದೈನಿಕ್ ಜಾಗರಣ್ ತಂಡ ಶುಕ್ರವಾರ ಬಿಹಾರದ ಅಮರೇಶ್ ಸಿಂಗ್ ಅವರ ಹೊಲಕ್ಕೆ ಭೇಟಿ ನೀಡಿದೆ. ಆದರೆ ಅಂಥ ಬೆಳೆ ಬೆಳೆದದ್ದು ಕಾಣಿಸಲಿಲ್ಲ. ಈ ಪ್ರದೇಶದಲ್ಲಿ ಅಂಥಹ ಬೆಳೆಯನ್ನು ತಾವು ಕಂಡೇ ಇಲ್ಲ ಎಂದು ಸ್ಥಳೀಯರೂ ಹೇಳಿದ್ದಾರೆ ಎನ್ನಲಾಗಿದೆ. ಇದೇ ವಿಚಾರವಾಗಿ ಫೋನ್ ಮೂಲಕ ಸಂಪರ್ಕಿಸಿದಾಗ ಸಿಂಗ್, ಈ ಬೆಳೆ ಇದ್ದದ್ದು ಸುಮಾರು 172 ಕಿಲೋಮೀಟರ್ ದೂರದ ನಳಂದದಲ್ಲಿ ಎಂದು ಹೇಳಿದರು. ಪತ್ರಕರ್ತರ ತಂಡ ಅಲ್ಲಿಗೆ ಹೋದಾಗ ಔರಂಬಾಗಾದ್‌ನಲ್ಲಿದೆ ಎಂದು ಮತ್ತೆ ದಿಕ್ಕುತಪ್ಪಿಸಲು ಯತ್ನಿಸಿದರು ಎಂದು ಅವರು ವರದಿ ಮಾಡಿದ್ದಾರೆ.
"ಪಾಟ್ನಾದ ಕೆಲ ಅಧಿಕಾರಿಗಳು ಹಾಪ್ ಶೂಟ್ಸ್ ಬೆಳೆ ಬಗ್ಗೆ ಕೇಳಿದ್ದಾರೆ. ಆದರೆ ಔರಂಗಾಬಾದ್ ಜಿಲ್ಲೆಯಲ್ಲಿ ಅಂಥ ಬೆಳೆ ಇಲ್ಲ" ಎಂದು ಔರಂಗಾಬಾದ್ ಜಿಲ್ಲಾಧಿಕಾರಿ ಸೌರವ್ ಜೋರ್ರ್ವಾಲ್ ಸ್ಪಷ್ಟಪಡಿಸಿದ್ದಾರೆ. ಜಾಗರಣ್ ವರದಿ ಪ್ರಕಾರ ಸಿಂಗ್ ಬೆಳೆದದ್ದು ಕೇವಲ ಕಪ್ಪಕ್ಕಿ ಮತ್ತು ಗೋಧಿ. ಇದುವರೆಗೆ ಹಾಪ್ ಶೂಟ್ಸ್ ಬೆಳೆದಿಲ್ಲ ಎಂದು ಪತ್ರಕರ್ತರು ವರದಿ ಮಾಡಿದ್ದಾರೆ. ಆ ಮೂಲಕ ಕೆಜಿಗೆ 1 ಲಕ್ಷ ರೂ ಮೌಲ್ಯದ ತರಕಾರಿ ಕಥೆ ಸುಳ್ಳು ಎಂಬುದನ್ನು ಸಾಬೀತು ಪಡಿಸಿದ್ದಾರೆ.