ನವದೆಹಲಿ: ದೇಶಾದ್ಯಂತ ಕ್ಷೀಪ್ರಗತಿಯಲ್ಲಿ 100 ಮಿಲಿಯನ್ ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದ್ದು, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಇದೊಂದು ಮಹತ್ವದ ಮೈಲುಗಲ್ಲು ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ. ಈ ಮೂಲಕ 85 ದಿನಗಳಲ್ಲಿ ಕ್ಷೀಪ್ರಗತಿಯಲ್ಲಿ ಅನೇಕ ಲಸಿಕೆಗಳನ್ನು ನೀಡಿದ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.
ಆರೋಗ್ಯ ಸಚಿವಾಲಯದ ಪ್ರಕಾರ, ಅಮೆರಿಕಾದಲ್ಲಿ 85 ದಿನಗಳಲ್ಲಿ ಶೇ. 92. 09 ಡೋಸ್ ಲಸಿಕೆ ನೀಡಿದ್ದರೆ, ಚೀನಾದಲ್ಲಿ ಶೇ.61. 42 ಮಿಲಿಯನ್ ಡೋಸ್ ಲಸಿಕೆ ನೀಡಲಾಗಿದೆ. ಶನಿವಾರ ಸಂಜೆ 7-30ರವರೆಗೂ ದೇಶಾದ್ಯಂತ 10, 12, 84,282 ಡೋಸ್ ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ.
ದಕ್ಷ ಕ್ಲಿನಿಕಲ್ ನಿರ್ವಹಣೆಯೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದೊಂದಿಗೆ ಉತ್ತಮ ಕ್ರಮ ಕೈಗೊಂಡಿದ್ದರಿಂದ ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಅಂದರೆ ಶೇ. 1.28 ರಷ್ಟು ಮರಣ ಪ್ರಮಾಣ ದೇಶದಲ್ಲಿರುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಜನವರಿ 16 ರಿಂದ ದೇಶದಲ್ಲಿ ಕೋವಿಡ್ ಲಸಿಕೆ ಅಭಿಯಾನವನ್ನು ಆರಂಭಿಸಲಾಗಿತ್ತು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗಿತ್ತು. ಮಾರ್ಚ್ 1ರಿಂದ ಆರಂಭಿಸಲಾದ ಎರಡನೇ ಹಂತದಲ್ಲಿ 60 ವರ್ಷಕ್ಕೂ ಮೇಲ್ಪಟ್ಟವರು ಹಾಗೂ 45 ರಿಂದ 59 ವರ್ಷದ ಒಳಗಿನ ಸಹ ಅಸ್ವಸ್ಥತೆ ಹೊಂದಿರುವವರು ಲಸಿಕೆ ಹಾಕಿಸಿಕೊಳ್ಳಬಹುದಾಗಿತ್ತು. ಏಪ್ರಿಲ್ 2ರಿಂದ 45 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದೆ.