ಲಖನೌ: ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ 12ನೇ ತರಗತಿವರೆಗಿನ ಎಲ್ಲ ಶಾಲೆಗಳನ್ನು ಮೇ 15ರವರೆಗೆ ಮುಚ್ಚುವಂತೆ ಹಾಗೂ 10 ಮತ್ತು 12ನೇ ತರಗತಿಗೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಮೇ 20ಕ್ಕೆ ಮುಂದೂಡಿ ಸರ್ಕಾರ ಗುರುವಾರ ಆದೇಶಿಸಿದೆ.
ಉತ್ತರ ಪ್ರದೇಶ ಪರೀಕ್ಷಾ ಮಂಡಳಿ ನಡೆಸುವ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪರೀಕ್ಷೆಯ ಹೊಸ ವೇಳಾಪಟ್ಟಿಯನ್ನು ಮೇ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹಿಂದೆ ನಿಗದಿಪಡಿಸಿದ ವೇಳಾಪಟ್ಟಿಯಂತೆ ಉತ್ತರ ಪ್ರದೇಶ ಶಿಕ್ಷಣ ಮಂಡಳಿಯ ಎಲ್ಲ ಪರೀಕ್ಷೆಗಳು ಮೇ 8ರಿಂದ ಆರಂಭವಾಗಬೇಕಿತ್ತು. ಕೋವಿಡ್ ಸೋಂಕು ಹೆಚ್ಚುತ್ತಿರುವ ಕಾರಣದಿಂದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸದ್ಯ ಉತ್ತರ ಪ್ರದೇಶದ ಹತ್ತು ಜಿಲ್ಲೆಗಳಲ್ಲಿ ರಾತ್ರಿ 8 ರಿಂದ ಬೆಳಿಗ್ಗೆ 7ರವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಸದ್ಯ ರಾಜ್ಯದಲ್ಲಿ 2 ಸಾವಿರ ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಕೋವಿಡ್ ಪ್ರಕರಣಗಳು ಹೆಚ್ಚಿರುವ ಲಖನೌ, ಅಲಹಾಬಾದ್, ವಾರಾಣಸಿ, ಕಾನ್ಪುರ, ಗೌತಮ ಬುದ್ಧ ನಗರ, ಗಾಜಿಯಾಬಾದ್, ಮೀರತ್ ಮತ್ತು ಗೋರಖ್‌ಪುರದಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ.