ನವದೆಹಲಿ: ದೇಶಾದ್ಯಂತ ಕರೊನಾ ಎರಡನೇ ಅಲೆ ಅತ್ಯಂತ ಕ್ಷಿಪ್ರಗತಿಯಲ್ಲಿ ಏರುತ್ತಿರುವುದು ಇದೀಗ ಆತಂಕ ಸೃಷ್ಟಿಸಿದ್ದು, ನಿಯಂತ್ರಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮತ್ತೊಂದೆಡೆ ಕರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಮಾಡಬೇಕೇ ಬೇಡವೇ ಎಂಬ ಚರ್ಚೆಗಳು ಜಾರಿಯಲ್ಲಿ ಇರುವ ನಡುವೆಯೇ ಕಾರ್ಯಪಡೆಯೊಂದು ಅಗತ್ಯ ಕ್ರಮವೊಂದರ ಬಗ್ಗೆ ಸೂಚನೆ ನೀಡಿದೆ.
ದೇಶದಲ್ಲಿ ಕರೊನಾ ನಿಯಂತ್ರಣಕ್ಕೆ ಬರಬೇಕಾದರೆ ಇನ್ನೆರಡು ತಿಂಗಳ ಕಾಲ 10ಕ್ಕಿಂತ ಹೆಚ್ಚು ಜನರು ಸೇರುವಂಥ ಎಲ್ಲ ಒಳಾಂಗಣ ಕಾರ್ಯಕ್ರಮಗಳನ್ನು ನಿಷೇಧಿಸಬೇಕು ಎಂಬುದಾಗಿ ಲ್ಯಾನ್ಸೆಟ್ ಕೋವಿಡ್-19 ಕಮಿಷನ್ಸ್ ಇಂಡಿಯಾ ಟಾಸ್ಕ್ಫೋರ್ಸ್ ತಿಳಿಸಿದೆ. 'ಮ್ಯಾನೇಜಿಂಗ್ ಇಂಡಿಯಾಸ್ ಕೋವಿಡ್-19 ವೇವ್: ಅರ್ಜೆಂಟ್ ಸ್ಟೆಪ್ಸ್' ಎಂಬ ಶಿರೋನಾಮೆಯಡಿ ಈ ವರದಿಯನ್ನು ಅದು ಪ್ರಕಟಿಸಿದೆ.
ಕರೊನಾ ಸೋಂಕು ಹೆಚ್ಚಲು ಕಾರಣ ಮತ್ತೆ ಹೆಚ್ಚಾದ ಸಭೆ-ಸಮಾರಂಭಗಳು ಎಂದು ಅಭಿಪ್ರಾಯಪಟ್ಟಿರುವ ಈ ಕಾರ್ಯಪಡೆ, ಏಪ್ರಿಲ್-ಮೇ ತಿಂಗಳಲ್ಲಿ ಅಂಥ ಹಲವು ಕಾರ್ಯಕ್ರಮಗಳು ನಿಗದಿಯಾಗಿವೆ. ಈ ಹಿನ್ನೆಲೆಯಲ್ಲಿ ಇನ್ನೆರಡು ತಿಂಗಳುಗಳ ಕಾಲ ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು ಅನಿವಾರ್ಯ ಎಂದು ಈ ಕಾರ್ಯಪಡೆ ಅಭಿಪ್ರಾಯ ಪಟ್ಟಿದೆ.