ಪಣಜಿ; ಕನ್ಯಾಕುಮಾರಿಯಿಂದ ಹೊರಟಿದ್ದ 'ಮರ್ಸಿಡಿಸ್' ಎಂಬ ಆಳ ಸಮುದ್ರದ ಮೀನುಗಾರಿಕಾ ದೋಣಿಯ ಅವಶೇಷಗಳು ಶನಿವಾರ ಮಧ್ಯಾಹ್ನ ಅರಬ್ಬಿ ಸಮುದ್ರದಲ್ಲಿ ದೊರೆತಿದ್ದು, ಅದರಲ್ಲಿದ್ದ 11 ಮೀನುಗಾರರು ನಾಪತ್ತೆಯಾಗಿದ್ದಾರೆ.
ಗೋವಾ ಕರಾವಳಿಯ 600 ನಾಟಿಕಲ್ ಮೈಲುಗಳಷ್ಟು (1,100 ಕಿ.ಮೀ.ಗಿಂತಲೂ ಹೆಚ್ಚು) ದೂರದಲ್ಲಿದೆ. ಈ ದೋಣಿಯ ಅವಶೇಷಗಳನ್ನು ಗುರುತಿಸಲಾಗಿದೆ. ದೋಣಿಯು ಯಾವುದೋ ಹಡಗಿಗೆ ಡಿಕ್ಕಿಯಾಗಿ ಅಪಘಾತಕ್ಕೊಳಗಾಗಿರುವ ಶಂಕೆ ವ್ಯಕ್ತವಾಗಿದೆ. ಕನ್ಯಾಕುಮಾರಿ ಜಿಲ್ಲೆಯ ವಲ್ಲವಿಲೈ ಕರಾವಳಿ ಗ್ರಾಮದಿಂದ ಈ ದೋಣಿಯಲ್ಲಿ ಹೊರಟಿದ್ದ 11 ಮೀನುಗಾರರ ಕುರಿತು ಈವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ನಾಪತ್ತೆಯಾದ ಮೀನುಗಾರರಿಗಾಗಿ ಇತರ ದೋಣಿಗಳಲ್ಲಿ ಮೀನುಗಾರರು ಕೂಡ ಶೋಧ ನಡೆಸಿದ್ದಾರೆ. ನೌಕಾಪಡೆ ಅಥವಾ ಕೋಸ್ಟ್ ಗಾರ್ಡ್ ಹಡಗು ಸಮುದ್ರದಲ್ಲಿ ಹೆಚ್ಚು ಆಳವಾದ ಸ್ಥಳವನ್ನು ತಲುಪಲು ನಾಲ್ಕೈದು ದಿನಗಳು ತೆಗೆದುಕೊಳ್ಳುವುದರಿಂದ ಮೀನುಗಾರರ ಸಂಘಗಳು ಮತ್ತು ನಾಪತ್ತೆಯಾದವರ ಸಂಬಂಧಿಕರು ಹೆಲಿಕಾಪ್ಟರ್ ಗಳನ್ನು ಬಳಸಿ ಶೋಧ ಮತ್ತು ರಕ್ಷಣಾ ಕಾರ್ಯ ನಡೆಸಬೇಕೆಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ರ್ಕಾರವನ್ನು ಒತ್ತಾಯಿಸಿದೆ.
'ಮರ್ಸಿಡಿಸ್' (ನೋಂದಣಿ ಸಂಖ್ಯೆ ಐಎನ್‌ಡಿ -ಟಿಎನ್ -15 - ಎಂಎಂ - 4775) ಏಪ್ರಿಲ್ 6ರಂದು ತೆಂಗಪಟ್ಟಣಂ ಬಂದರಿನಿಂದ ಹೊರಟಿತ್ತು. "ಶುಕ್ರವಾರ ಸಂಜೆಯವರೆಗೆ ಮೀನುಗಾರರು ಸುತ್ತಮುತ್ತಲಿನ ಇತರ ದೋಣಿಗಳಲ್ಲಿರುವವರೊಂದಿಗೆ ವೈರ್‌ಲೆಸ್ ಸಾಧನದ ಮೂಲಕ ಮಾತನಾಡಿದ್ದಾರೆ" ಎಂದು ತಮಿಳುನಾಡಿನ ರಾಮನಾಥಪುರಮ್ ಜಿಲ್ಲೆಯ ಮಂಡಪಮ್ ನ ಮೀನುಗಾರಿಕಾ ಸಹಾಯಕ ನಿರ್ದೇಶಕ ಜೆ.ಎಲ್ ಅಜಿತ್ ಸ್ಟಾಲಿನ್ ಹೇಳಿದ್ದಾರೆ.
ಮರ್ಸಿಡಿಸ್ ನ ಹಾನಿಗೊಳಗಾದ ಅವಶೇಷಗಳು ಕಂಡಿವೆ ಎಂದು ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಮ್ಮ ಹಳ್ಳಿಯ 'ಪೆರಿಯನಾಯಗಿ' ದೋಣಿಯ ಮಾಲೀಕ ಜೆನ್ಸನ್‌ರಿಂದ ಸ್ಯಾಟಲೈಟ್ ದೂರವಾಣಿ ಕರೆಯಿಂದ ನಮಗೆ ಮಾಹಿತಿ ಸಿಕ್ಕಿತು. ದೋಣಿಯ ಕ್ಯಾಬಿನ್ ತೇಲುತ್ತಿರುವಂತೆ ಕಂಡುಬಂದಿದೆ. ಮೀನುಗಾರರು, ಎಂಜಿನ್ ಮತ್ತು ಇತರ ಭಾಗಗಳು ಕಾಣೆಯಾಗಿವೆ ಎಂದು ವಲ್ಲವಿಲೈನ ದೋಣಿ ಮಾಲೀಕರ ಸಂಘದ ಅಧ್ಯಕ್ಷ ಎ ದಿಲೀಪ್ ಜೋಸ್ ತಿಳಿಸಿದ್ದಾರೆ. ಕೆಲವು ಆಧಾರ್ ಕಾರ್ಡ್ ಮತ್ತು ದೋಣಿಯ ಮುರಿದ ಭಾಗಗಳನ್ನು ಮಾತ್ರ ಗುರುತಿಸಬಹುದೆಂದು ಮೀನುಗಾರರು ದಿಲೀಪ್ ಅವರಿಗೆ ತಿಳಿಸಿದ್ದಾರೆ.
ನಿನ್ನೆಯೇ ಸುದ್ದಿ ಇತ್ತು;
ಈ ಬಗ್ಗೆ ಶನಿವಾರವೇ ಮಾಹಿತಿ ಇದ್ದು, ಈ ಬಗ್ಗೆ ಕಾರವಾರ ಕೋಸ್ಟ್ ಗಾರ್ಡ್, ಮೀನುಗಾರಿಕಾ ಇಲಾಖೆ ಹಾಗೂ ಕರಾವಳಿ ಕಾವಲು ಪಡೆ ಪೊಲೀಸರೊಂದಿಗೂ ವಿಚಾರಿಸಲಾಗಿತ್ತು. ಆದರೆ ದೋಣಿ ಮುಳುಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಳ್ಳಿ ಹಾಕಿದ್ದರು. ನಮಗೇ ಇಲ್ಲದ ಮಾಹಿತಿ ಮಾಧ್ಯಮಗಳಿಗೆ ಹೇಗೆ ಬರುತ್ತದೆ ಎಂದು ಪ್ರಶ್ನಿಸಿದ್ದರು.