ತಿರುಮಲ,: ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತಿರುಪತಿ ತಿರುಮಲ ದೇಗುಲ ಮಂಡಳಿಯು ಸರ್ವ ದರ್ಶನ ಟೋಕನ್ ವಿತರಣೆಯನ್ನು ಏಪ್ರಿಲ್ 12ರಿಂದ ಸ್ಥಗಿತಗೊಳಿಸುತ್ತಿರುವುದಾಗಿ ತಿಳಿಸಿದೆ.
ಏಪ್ರಿಲ್ 11ಕ್ಕೆ ಟೋಕನ್ ನೀಡುವುದನ್ನು ಕೊನೆಗೊಳಿಸುವುದಾಗಿ ಮಾಹಿತಿ ನೀಡಿದೆ.
"ತಿರುಪತಿ ನಗರದಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿವೆ. ಭೂದೇವಿ ಕಾಂಪ್ಲೆಕ್ಸ್ ಹಾಗೂ ವಿಷ್ಣು ನಿವಾಸಂನಲ್ಲಿ ಟೋಕನ್‌ಗಳನ್ನು ತೆಗೆದುಕೊಳ್ಳಲು ಸಾವಿರಾರು ಜನರು ಕಾಯುತ್ತಾ ನಿಲ್ಲಬೇಕಾಗುತ್ತದೆ. ಇಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ" ಎಂದು ಟಿಟಿಡಿ ತಿಳಿಸಿದೆ.
ಭಕ್ತರ ಆರೋಗ್ಯ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಟೋಕನ್ ರದ್ದುಗೊಳಿಸಲಾಗಿದೆ ಎಂದು ಹೇಳಿದೆ. ಆನ್‌ಲೈನ್‌ನಲ್ಲಿ ನೀಡುವ ಟೋಕನ್‌ಗಳ ವಿತರಣೆ ಮುಂದುವರೆಯಲಿದೆ.
ಆನ್‌ಲೈನ್‌ನಲ್ಲಿ ಪ್ರತಿದಿನ 15 ಸಾವಿರ ಟೋಕನ್‌ಗಳನ್ನು ನೀಡಲಾಗುತ್ತದೆ.
ಕಳೆದ ತಿಂಗಳು ಸರ್ವದರ್ಶನ ಟೋಕನ್‌ಗಳ ಸಂಖ್ಯೆಯನ್ನು ಟಿಟಿಡಿ 22 ಸಾವಿರದಿಂದ 15 ಸಾವಿರಕ್ಕೆ ಇಳಿಸಿತ್ತು. ದೇವಸ್ಥಾನಕ್ಕೆ ಬರುವ ಭಕ್ತರೆಲ್ಲರೂ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇಲ್ಲವೆಂದರೆ ದೇವಸ್ಥಾನಕ್ಕೆ ಪ್ರವೇಶ ನೀಡುವುದಿಲ್ಲ ಎಂದು ಟಿಟಿಡಿ ಹೆಚ್ಚುವರಿ ಅಧಿಕಾರಿ ಎ.ವಿ. ಧರ್ಮ ರೆಡ್ಡಿ ತಿಳಿಸಿದ್ದರು.